ADVERTISEMENT

ಹುಬ್ಬಳ್ಳಿ | ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:47 IST
Last Updated 31 ಜನವರಿ 2024, 14:47 IST
   

ಹುಬ್ಬಳ್ಳಿ: ‘ನಗರದ ವೀರಾಪುರ –ಟೋಲ್‌ನಾಕಾದಿಂದ ಮಂಟೂರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ಗಣೇಶಪೇಟೆಯಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ರೈತರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು’ ಎಂದು ಹುಬ್ಬಳ್ಳಿ ತಾಲ್ಲೂಕು ರೈತ ಸಂಘದ ನಿರ್ದೇಶಕ ಕುಮಾರಗೌಡ ಪಾಟೀಲ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ತಿಂಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಯನ್ನು ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಆರಂಭದಲ್ಲಿ ಹೇಳಲಾಗಿತ್ತು. ಐದು ವರ್ಷವಾದರೂ ಸ್ಥಳಾಂತರ ಮಾಡಿಲ್ಲ’ ಎಂದು ದೂರಿದರು.

‘ತಾತ್ಕಾಲಿಕ ಮಾರುಕಟ್ಟೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಅಲ್ಲಿಗೆ ಬರುವ ಲಾರಿಗಳು ಹಾಗೂ ವ್ಯಾಪಾರಸ್ಥರ ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ರೈತರ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳು ಸಂಚರಿಸಲು ಸಮಸ್ಯೆಯಾಗುತ್ತಿದೆ. ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ’ ಎಂದರು.

ADVERTISEMENT

‘ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮ ಇದೆ. ಅವರಿಗೆ ದುರ್ವಾಸನೆ ಬರಬಾರದು ಎಂದು ಈಗ ಇರುವ ತಾತ್ಕಾಲಿಕ ಮಾರುಕಟ್ಟೆಯನ್ನು ಅಲ್ಲಿಂದ ಒಂದು ಕಿ.ಮೀ ದೂರದಲ್ಲಿರುವ ರೈತರ ಜಮೀನಿಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆ ಜಮೀನನ್ನು ರೈತರು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ದಾನ ನೀಡಿದ್ದು, ಯಾವ ಕಾರಣಕ್ಕೂ ಅಲ್ಲಿಗೆ ಸ್ಥಳಾಂತರಿಸಬಾರದು’ ಎಂದು ಒತ್ತಾಯಿಸಿದರು.

‘ಮಾರುಕಟ್ಟೆಯಿಂದ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸುವಂತೆ ಹಲವು ಬಾರಿ ಸಂಬಂಧಿಸಿದ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಎಂಟು ದಿನಗಳಲ್ಲಿ ಮಾರುಕಟ್ಟೆಯನ್ನು ಸ್ಥಳಾಂತರಿಸದಿದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

ಹುಬ್ಬಳ್ಳಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಮೀಸಿ, ಪಕ್ಕೀರಗೌಡ ಪಾಟೀಲ, ಗುರುಸಿದ್ದಪ್ಪ ಕಟಗಿ, ಮೂರುಸಾವಿರಪ್ಪ ದಂಡಿನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.