ADVERTISEMENT

‘ಕೃಷ್ಣಾ’ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ: ಎನ್‌.ಎಚ್. ಕೋನರಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 11:29 IST
Last Updated 3 ಮಾರ್ಚ್ 2021, 11:29 IST
ಎನ್‌.ಎಚ್‌. ಕೋನರಡ್ಡಿ
ಎನ್‌.ಎಚ್‌. ಕೋನರಡ್ಡಿ   

ಹುಬ್ಬಳ್ಳಿ: ‘ಉತ್ತರ ಕರ್ನಾಟಕದ ಕೃಷ್ಣಾ ಕಣಿವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು. ಬೇಡಿಕೆ ಈಡೇರಿಕೆಗಾಗಿ ಪಕ್ಷದಿಂದ ಸದ್ಯದಲ್ಲೇ ಟ್ರಾಕ್ಟರ್ ರ‍್ಯಾಲಿ ಮತ್ತು ಗ್ರಾಮ ವಾಸ್ತವ್ಯ ಜನಾಂದೋಲ ಹೋರಾಟ ಆರಂಭಿಸಲಾಗುವುದು’ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಒತ್ತಾಯಿಸಿದರು.

‘ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳ ಗ್ರಾಮಗಳಿಗೆ ಟ್ರಾಕ್ಟರ್‌ನಲ್ಲಿ ತೆರಳಿ ಗ್ರಾಮ ವಾಸ್ತವ್ಯ ಮಾಡಿ, ಹೋರಾಟ ರೂಪಿಸಲಾಗುವುದು. ನಂತರ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೃಷ್ಣಾ ಕಣಿವೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಮಹದಾಯಿ, ಕಳಸಾ–ಬಂಡೂರಿ, ಮಲಪ್ರಭಾ ಒಳಗೊಂಡಂತೆ ಆಲಮಟ್ಟಿ ಜಲಾಶಯದ ನೀರು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಹೆಚ್ಚಿನ ಉಪಯೋಗವಾಗುತ್ತಿದೆ. ತನ್ನ ಪಾಲಿನ ನೀರನ್ನು ಉಪಯೋಗಿಸಲು ಕರ್ನಾಟಕ ಸರ್ಕಾರ ಇದುವರೆಗೆ ಕ್ರಮ ಕೈಗೊಂಡಿಲ್ಲ. ವಿಳಂಬ ಧೋರಣೆಯಿಂದಾಗಿ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಹೇಳಿದರು.

ADVERTISEMENT

‘ಬಾಕಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಲುವೆ ಮೂಲಕ ರೈತರಿಗೆ ನೀರು ಕೊಡುವ ಕಾಮಗಾರಿಯನ್ನು ಪೂರ್ಣಗೊಳಿಸಲು ಲಕ್ಷಾಂತರ ಕೋಟಿ ಅನುದಾನದ ಅಗತ್ಯವಿದೆ. ಹಾಗಾಗಿ, ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಬೇಕು’ ಎಂದರು.

‘ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಖಾಸಗಿ ವಿಮಾ ಕಂಪನಿಗಳಿಗೆ ವಹಿಸಿರುವುದರಿಂದ, ರೈತರಿಗೆ ಸರಿಯಾದ ಸಮಯದಲ್ಲಿ ಪರಿಹಾರ ಸಿಗುತ್ತಿಲ್ಲ. ಹಾಗಾಗಿ, ಯೋಜನೆಯನ್ನು ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ವಹಿಸಬೇಕು’ ಎಂದು ಆಗ್ರಹಿಸಿದರು.

ಪಕ್ಷದ ವೀಕಕ್ಷರಾದ ನಾಸೀರ್ ಭಾಗವಾನ್ ಮತ್ತು ಶಂಕರ ಮಾಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.