ADVERTISEMENT

ಹುಬ್ಬಳ್ಳಿ: ರಸ್ತೆಗುಂಡಿಯಲ್ಲಿ ಬಾಳೆ ಗಿಡ ನೆಟ್ಟ ಆಕ್ರೋಶ

ಶಾಂತಿನಗರ: ರಸ್ತೆಯ ತಗ್ಗು–ಗುಂಡಿ ಮುಚ್ಚಲು ಆಗ್ರಹ; ಕಾಂಗ್ರೆಸ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:20 IST
Last Updated 22 ಜುಲೈ 2022, 5:20 IST
ಹುಬ್ಬಳ್ಳಿಯ ಶಾಂತಿನಗರ ವೃತ್ತದ ರಸ್ತೆ ಗುಂಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಶಾಂತಿನಗರ ವೃತ್ತದ ರಸ್ತೆ ಗುಂಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಇಲ್ಲಿನ ಶಾಂತಿನಗರದ ವೃತ್ತದ ರಸ್ತೆ ಗುಂಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಬಾಳೆಗಿಡ ನೆಟ್ಟು ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು.

ಅವಳಿನಗರದ ಪ್ರಮುಖ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಚೆಗೆ ಸುರಿದ ಮಳೆಯಿಂದ ನಗರದಲ್ಲಿ ಮತ್ತಷ್ಟು ರಸ್ತೆ ಗುಂಡಿಗಳು ನಿರ್ಮಾಣವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರದ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಹರಿದು ಬಂದರೂ, ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬಿಜೆಪಿ ಸರ್ಕಾರ ಮತ್ತು ಶಾಸಕ ಜಗದೀಶ ಶೆಟ್ಟರ್‌ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಮಾತನಾಡಿ, ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿವೆ. ಕಳಪೆ ಕಾಮಗಾರಿಯ ಬಣ್ಣ ಇದೀಗ ಬಯಲಾಗಿದೆ. ಇಷ್ಟಾದರೂ ಶಾಸಕ ಜಗದೀಶ ಶೆಟ್ಟರ್‌ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡುತ್ತಿಲ್ಲ. ಪಾಲಿಕೆಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂರು ದಿನಗಳಿಂದ ನಗರದಲ್ಲಿ ಮಳೆ ನಿಂತಿದೆ. ಪಾಲಿಕೆ ಅಧಿಕಾರಿಗಳು ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು

ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಹೂವಪ್ಪ ದಾಯಿಗೋಡಿ, ಅಶೋಕ ಕಲಾದಗಿ, ಮಹೇಶ ಭಜಂತ್ರಿ, ಗಂಗಾಧರ ಡಿ. ಹಾಗೂ ಬಸವರಾಜ ಗಡಗಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.