
ಧಾರವಾಡ: ಜಿಲ್ಲೆಯಲ್ಲಿ ಶಿವರಾತ್ರಿ ಹಬ್ಬವನ್ನು ಭಾನುವಾರ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮೊದಲಾದ ಕಾರ್ಯ ನೆರವೇರಿಸಲಾಯಿತು.
ದೇಗುಲಗಳಲ್ಲಿ ತಳಿರು ತೋರಣ ಕಟ್ಟಿ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರ ವಿಗ್ರಹ, ಶಿವಲಿಂಗಗಳನ್ನು ವಿವಿಧ ಪುಷ್ಪಗಳು, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಬೆಳಿಗ್ಗೆಯಿಂದಲೇ ದೇಗುಲಗಳಲ್ಲಿ ದೇವರ ಮೂರ್ತಿ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.
ಶಿವರಾತ್ರಿ ಅಂಗವಾಗಿ ಭಕ್ತರು ವಿಶೇಷ ಪೂಜೆ ನೆರವೇರಿಸಿದರು. ಕ್ಷೀರ, ಫಲ, ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ದೇವರ ವಿಗ್ರಹ, ಶಿವಲಿಂಗ ದರ್ಶನ ಮಾಡಿ ಪುನೀತ ಭಾವ ಮೆರೆದರು.
ಸೋಮೇಶ್ವರ ದೇಗುಲ, ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನ, ಜಯನಗರದ ಈಶ್ವರ ಗುಡಿ, ಶ್ರೀನಗರ ವೃತ್ತ ಸಮೀಪ ಶಿವಾಲಯ, ಕೊಪ್ಪದಕೇರಿ ಶಿವಾಲಯ, ಗಾಂಧಿನಗರದ ಈಶ್ವರ ದೇಗುಲ ಸಹಿತ ಎಲ್ಲ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಘಂಟಾನಾದಗಳು ಮೊಳಗಿದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಇತ್ತು. ಭಜನೆ, ಗಾಯನ, ಸಂಗೀತ, ಕಾರ್ಯಕ್ರಮಗಳು ಜರುಗಿದವು.
ಕೆಲವರು ಉಪವಾಸ ವ್ರತ ಮಾಡಿದರು. ಅಹೋರಾತ್ರಿ ಜಾಗರಣೆ ಮಾಡಿದರು. ಭಜನೆ ಮಾಡಿ ಶಿವನನ್ನು ಆರಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.