ADVERTISEMENT

ಜಿಲ್ಲಾಧಿಕಾರಿಯಾದ ಬಳಿಕ ಕಿಮ್ಸ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ ನಿತೇಶ ಪಾಟೀಲ

‘ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೂ ಆದ್ಯತೆ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 13:48 IST
Last Updated 1 ಜುಲೈ 2020, 13:48 IST
   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಮಾಡುವ ಜೊತೆಗೆ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳ ಉತ್ತೇಜನಕ್ಕೂ ಆದ್ಯತೆ ಕೊಡಲಾಗುವುದು ಎಂದು ಧಾರವಾಡದ ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಯಾದ ಬಳಿಕ ಬುಧವಾರ ಮೊದಲ ಬಾರಿಗೆ ಕಿಮ್ಸ್‌ಗೆ ಭೇಟಿ ನೀಡಿದ ಅವರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಇರುವ ಸೌಲಭ್ಯಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಸಿ.ಸಿ.ಟಿ.ವಿ. ಮೂಲಕ ಕೋವಿಡ್‌ ವಾರ್ಡ್‌, ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಕೇಂದ್ರದ ಕಾರ್ಯ ಪರಿಶೀಲಿಸಿದರು. ಕಟ್ಟಡದ ಹೊರಭಾಗದಿಂದ ಕೋವಿಡ್‌ ವಾರ್ಡ್ ವೀಕ್ಷಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಿತೇಶ ‘ಸೋಂಕು ನಿಯಂತ್ರಿಸಲು ಜಿಲ್ಲೆಯ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕಿಮ್ಸ್‌ನಲ್ಲಿ 250 ಬೆಡ್‌ಗಳು ಈಗಾಗಲೇ ಸಿದ್ಧಗೊಂಡಿವೆ. ಸದ್ಯಕ್ಕೆ ನಿತ್ಯ 300 ಸ್ವಾಬ್‌ ಪರೀಕ್ಷೆ ಮಾಡಲಾಗುತ್ತಿದ್ದು, ಇದನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ. ಕಿಮ್ಸ್‌ನ ಮೇಲಿನ ಭಾರ ಕಡಿಮೆ ಮಾಡುವ ಉದ್ದೇಶದಿಂದ ಸೋಂಕಿನ ಲಕ್ಷಣಗಳು ಇಲ್ಲದ ಸೋಂಕಿತರನ್ನು ಆಯುರ್ವೇದ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ್ದೇನೆ’ ಎಂದರು.

ADVERTISEMENT

‘ಮಳೆಗಾಲವೂ ಇರುವ ಕಾರಣ ಅದಕ್ಕೆ ತಕ್ಕ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ನಗರೋತ್ಥಾನ ಯೋಜನೆಗಳ ಪ್ರಗತಿಗೂ ಒತ್ತು ಕೊಡಲಾಗುವುದು. ಕೊರೊನಾದ ನೆಪದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳಬಾರದು ಎನ್ನುವ ಉದ್ದೇಶ ನನ್ನದು’ ಎಂದರು.

ಈ ಉದ್ದೇಶದಿಂದಲೇ ಜು. 4ರಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದೂ ತಿಳಿಸಿದರು.

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಅರುಣಕುಮಾರ ಪಾಟೀಲ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಲಕ್ಷ್ಮಿಕಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.