ADVERTISEMENT

ಹುಬ್ಬಳ್ಳಿ: ಕುಸಿದ ಮನೆ, 1,331 ಹೆಕ್ಟೇರ್‌ ಬೆಳೆ ಹಾಳು

ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ, ಗೌರಿ ಹುಣ್ಣಿಮೆ ಕಸಿದ ವರುಣ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:47 IST
Last Updated 19 ನವೆಂಬರ್ 2021, 15:47 IST
ಹುಬ್ಬಳ್ಳಿ ಹೊರವಲಯದ ಸುಳ್ಳಕ್ಕೆ ಹೋಗುವ ಮಾರ್ಗದಲ್ಲಿ ಗುಂಡಿಗಳು ಬಿದ್ದ ರಸ್ತೆಯಲ್ಲಿಯೇ ಸಾಗಿದ ಆಟೊ
ಹುಬ್ಬಳ್ಳಿ ಹೊರವಲಯದ ಸುಳ್ಳಕ್ಕೆ ಹೋಗುವ ಮಾರ್ಗದಲ್ಲಿ ಗುಂಡಿಗಳು ಬಿದ್ದ ರಸ್ತೆಯಲ್ಲಿಯೇ ಸಾಗಿದ ಆಟೊ   

ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಎರಡು ದಿನಗಳಲ್ಲಿ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಒಂಬತ್ತು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 473 ಹೆಕ್ಟೇರ್‌ ಹತ್ತಿ ಹಾಳಾಗಿದೆ. ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನಲ್ಲಿ 1,331 ಹೆಕ್ಟೇರ್‌ ಬೆಳೆ ಮಳೆ ಪಾಲಾಗಿದೆ.

ಶುಕ್ರವಾರ ಬೆಳಿಗ್ಗೆಯಿಂದಲೂ ನಗರದಲ್ಲಿ ಮೋಡಕವಿದ ವಾತಾವರಣವಿತ್ತು. ಬೆಳಿಗ್ಗೆ ಜಿಟಿ ಜಿಟಿಯಾಗಿ ಶುರುವಾದ ಮಳೆ ರಾತ್ರಿ ತನಕ ಮುಂದುವರಿದಿತ್ತು. ಇದರಿಂದಾಗಿ ವಾಹನ ಸವಾರರು, ನಿತ್ಯ ಕೆಲಸಕ್ಕೆ ಹೋಗುವವರು, ಪತ್ರಿಕೆ ಹಂಚುವ ಹುಡುಗರು ಸೇರಿದಂತೆ ಎಲ್ಲರೂ ಮಳೆಯ ನಡುವೆಯೇ ಕೆಲಸ ಮಾಡಬೇಕಾಯಿತು.

ದುರ್ಗದ ಬೈಲ್‌, ಜನತಾ ಬಜಾರ್‌, ರಮೇಶ ಭವನ ಮುಂಭಾಗ, ಹಳೇ ಹುಬ್ಬಳ್ಳಿ, ಆನಂದ ನಗರ ಸೇರಿದಂತೆ ಅನೇಕ ಕಡೆ ಕೈಯಲ್ಲಿ ಕೊಡೆ ಹಿಡಿದುಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದ ಚಿತ್ರಣ ಕಂಡು ಬಂತು. ನೇಕಾರ ನಗರದ ಬ್ರಿಡ್ಜ್‌ ತುಂಬಿ ಹರಿದಿದ್ದರಿಂದ ಸವಾರರು ಬೇರೆ ಮಾರ್ಗದಲ್ಲಿ ಹೋದರು.

ADVERTISEMENT

ಬಮ್ಮಾಪುರ ಓಣಿಯ ರಾಮಣ್ಣ ಚನ್ನಪ್ಪ ಮುತ್ತಣ್ಣವರ, ಸಿದ್ದಮ್ಮ ಚನ್ನಬಸಪ್ಪ ನರಗುಂದ ಘಂಟಿಕೇರಿ ಓಣಿಯ ವಿಶಾಲ ಎಸ್‌. ಗವಾಡೆ, ಹಳೇ ಹುಬ್ಬಳ್ಳಿಯ ದಿಡ್ಡಿ ಓಣಿಯ ಈರಣ್ಣ ಬಡಿಗೇರ, ಅಕ್ಕಸಾಲಿಗರ ಓಣಿಯ ಮೊಹಮ್ಮದ್ ಹನೀಫ್‌ ದೊಡ್ಡಮನಿ, ಗಬ್ಬೂರು ಗ್ರಾಮದ ಸಿದ್ದಪ್ಪ ಬೆಳಗಾವಿ, ಅಸಾರಹೊಂಡದ ಮೆಹಬೂಬಿ ಘಂಟಿವಾಲೆ ಎಂಬುವರ ಮನೆಗೆ ಭಾಗಶಃ ಹಾನಿಗಳಾಗಿವೆ ಎಂದು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.

ಹೊಲಗಳಲ್ಲಿ ನೀರು ತುಂಬಿದ್ದು ಹತ್ತಿ ಬೆಳೆ ಹಾನಿಯಾಗಿದೆ. ಮಳೆಯ ನಡುವೆಯೂ ಅಧಿಕಾರಿಗಳು ಗೋಕುಲ ಗ್ರಾಮ, ತಾರಿಹಾಳ ಗ್ರಾಮ ಸೇರಿದಂತೆ ವಿವಿಧೆಡೆ ಬೆಳೆ ಸಮೀಕ್ಷೆ ಮಾಡಿದರು.

ಖುಷಿ ಕಸಿದ ಮಳೆ: ಗೌರಿ ಹುಣ್ಣಿಮೆ ದಿನವಾದ ಶುಕ್ರವಾರ ಆರತಿ ಮಾರಾಟ ಮಾಡುವವರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ವ್ಯಾಪಾರ ಮಾಡಲು ವರುಣ ಅವಕಾಶವೇ ನೀಡಲಿಲ್ಲ. ಇದರಿಂದಾಗಿ ವ್ಯಾಪಾರಿಗಳಿಗೆ ಹಾಗೂ ಆರತಿ ಖರೀದಿಸುವವರಿಗೂ ನಿರಾಸೆಯಾಯಿತು.

ಹಳೇ ಹುಬ್ಬಳ್ಳಿಯ ಜಯಶ್ರೀ ಕುಂಕನೂರ ಎಂಬುವರು ಪ್ರತಿ ವರ್ಷ ಗೌರಿ ಹುಣ್ಣಿಮೆ ಸಮಯದಲ್ಲಿ ಸಕ್ಕರೆ ಆರತಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದರು. ಜಯಶ್ರೀ ಅವರು, ಆನಂದ ನಗರದದಲ್ಲಿ ಕೊಠಡಿ ಬಾಡಿಗೆ ಪಡೆದು 20 ದಿನಗಳಿಂದ ಆರತಿ ತಯಾರಿಸಿದ್ದರು. ಮಳೆಯ ನೀರು ಕಟ್ಟಡದಲ್ಲಿ ನುಗ್ಗಿ 7 ಕ್ವಿಂಟಲ್‌ ಸಕ್ಕರೆ ಗೊಂಬೆಗಳು ಕರಗಿ ಹೋಗಿವೆ.

ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖುರ್ಚು ಮಾಡಿ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತೇವೆ. ಮಳೆಯಿಂದ ಎಲ್ಲವೂ ನೀರು ಪಾಲಾದವು. ಖರೀದಿಸುವವರೂ ಇಲ್ಲದಂತಾಯಿತು ಎಂದು ಇನ್ನೊಬ್ಬ ಆರತಿ ವ್ಯಾಪಾರಿ ಪಾರ್ವತಿ ತಿಮ್ಮಸಾಗರ ನೋವು ತೋಡಿಕೊಂಡರು.

ಹುಬ್ಬಳ್ಳಿಯ ಗಬ್ಬೂರು ಗ್ರಾಮದಲ್ಲಿ ಸಿದ್ದಪ್ಪ ಬೆಳಗಾವಿ ಎಂಬುವರ ಮನೆ ಮಳೆಗೆ ಬಿದ್ದಿರುವುದು

ಹುಬ್ಬಳ್ಳಿ ತಾಲ್ಲೂಕಿನಲ್ಲಿ 9 ಮನೆಗಳಿಗೆ ಭಾಗಶಃ ಹಾನಿ

ಮಾರಾಟಕ್ಕೆ ಇಟ್ಟಿದ್ದ ಸಕ್ಕರೆ ಆರತಿ ನೀರು ಪಾಲು

ಮಳೆ ನಡುವೆಯೂ ಅಧಿಕಾರಿಗಳಿಂದ ಬೆಳೆ ಸಮೀಕ್ಷೆ

ಗ್ರಾಮೀಣ ತಾಲ್ಲೂಕಿನಲ್ಲಿ 32 ಮನೆಗಳಿಗೆ ಹಾನಿ

ಮಳೆಯಿಂದಾಗಿ ಹಿಂದಿನ ಆರು ದಿನಗಳ ಅವಧಿಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕು ವ್ಯಾಪ್ತಿಯಲ್ಲಿ 32 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ರಾಯನಾಳ, ದೇವರಗುಡಿಹಾಳ, ಶಿರಗುಪ್ಪಿ, ಬ್ಯಾಹಟ್ಟಿ, ಛಬ್ಬಿ, ಕುಸುಗಲ್‌, ಸುಳ್ಳ, ಭಂಡಿವಾಡ, ಬಮ್ಮಸಮುದ್ರ, ಅಂಚಟಗೇರಿ, ಛಬ್ಬಿ ಮತ್ತು ಬುಡರಸಿಂಗಿಯಲ್ಲಿ ಮನೆಗಳು ಕುಸಿದಿವೆ.

ಹುಬ್ಬಳ್ಳಿಯ ಬೆಂಗೇರಿಯಲ್ಲಿ ಕೊಡೆ ಹಿಡಿದುಕೊಂಡು ಮಳೆಯಲ್ಲಿಯೇ ಶಾಲೆಗೆ ಹೋದ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.