ADVERTISEMENT

ಧಾರವಾಡ: ‘ಎಐ’ ಗಣೇಶ ಮೂರ್ತಿ ಸೊಬಗು

ಬಿ.ಜೆ.ಧನ್ಯಪ್ರಸಾದ್
Published 26 ಆಗಸ್ಟ್ 2025, 6:10 IST
Last Updated 26 ಆಗಸ್ಟ್ 2025, 6:10 IST
ಧಾರವಾಡದ ಕೆಲಗೇರಿಯ ಗಾಯತ್ರಿಪುರಂನ ಮನೆಯಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಎಐ ಗಣೇಶ ಮೂರ್ತಿ ಸಿದ್ಧಪಡಿಸಿದರು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಕೆಲಗೇರಿಯ ಗಾಯತ್ರಿಪುರಂನ ಮನೆಯಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ಎಐ ಗಣೇಶ ಮೂರ್ತಿ ಸಿದ್ಧಪಡಿಸಿದರು ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ    

ಧಾರವಾಡ: ಕಲಾವಿದರ ಕೈಚಳಕದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಕಲಾತ್ಮಕ ವಿನ್ಯಾಸದ ಗಣೇಶ ಮೂರ್ತಿಗಳು ಸಿದ್ಧವಾಗಿವೆ. ವಿಶಿಷ್ಟ ಸೊಬಗಿನ ಈ ಮೂರ್ತಿಗಳು ಗಮನ ಸೆಳೆಯುತ್ತಿವೆ.

‘ಎಐ’ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಲವರು ತಯಾರಿ ಮಾಡಿಕೊಂಡಿದ್ದಾರೆ. ಕಲಾವಿದರಿಗೆ ‘ಎಐ’ ಗಣೇಶ ಚಿತ್ರ ನೀಡಿ ಮೂರ್ತಿ ಸಿದ್ಧಪಡಿಸಲು ಮುಂಚಿತವಾಗಿಯೇ ಬು‌ಕ್ಕಿಂಗ್‌ ಮಾಡಿದ್ದಾರೆ.

ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಅವರು ‘ಎಐ’ ಗಣೇಶ ವಿಗ್ರಹ ತಯಾರಿ ಪ್ರಯೋಗ ಮಾಡಿದ್ದಾರೆ. ‘ಬಾಲ ಗಣಪ’ ‘ಗಣಪತಿ ಪಕ್ಕ ಮೂಷಿಕ’, ‘ಮೋಡದ ಮೇಲೆ ಆಸೀನವಾಗಿರುವ ಗಜಾನನ’ ಮೊದಲಾದ ವಿಗ್ರಹಗಳನ್ನು ಸಿದ್ಧಪಡಿಸಿದ್ದಾರೆ.

ADVERTISEMENT

‘ಎಐ ಚಿತ್ರದ ಗಣೇಶ ಮೂರ್ತಿಗಳಿಗೆ ಬೇಡಿಕೆ ಇದೆ. ಇದು ಬಹಳ ಶ್ರಮದ ಕೆಲಸ. ‘ಮೌಲ್ಡಿಂಗ್‌’ ಬಳಸಲು ಆಗಲ್ಲ, ಕೈಯಲ್ಲೇ ಮಾಡಬೇಕು. ಗ್ರಾಹಕರು ಕೊಟ್ಟ ‘ಎಐ’ ಚಿತ್ರ ಆಧರಿಸಿ ಕಂಪ್ಯೂಟರ್‌ನಲ್ಲಿ‘ಗ್ರಾಫ್‌’ (ಅಳತೆ, ಗಾತ್ರ ಅನುಪಾತ) ಸಿದ್ಧಪಡಿಸಿ ಕಾರ್ಯೋನ್ಮುಖರಾಗುತ್ತೇವೆ’ ಎಂದು ಕಲಾವಿದ ಮಂಜನಾಥ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಯಲ್ಲಿ ಪ್ರತಿಷ್ಠಾಪಿಸುವ ಒಂದರಿಂದ ಎರಡೂವರೆ ಅಡಿ ಎತ್ತರ ಸಾಂಪ್ರದಾಯಿಕ ಮೂರ್ತಿಗಳಿಗೆ ₹800ರಿಂದ ₹5 ಸಾವಿರ, ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಮೂರರಿಂದ ಎಂಟು ಅಡಿ ಎತ್ತರದ ಮೂರ್ತಿಗಳಿಗೆ ₹10 ಸಾವಿರದಿಂದ ₹45 ಸಾವಿರದವರೆಗೆ ದರ ಇದೆ. ‘ಎಐ’ ಮೂರ್ತಿಗಳಿಗೆ ಇದಕ್ಕಿಂತ ಶೇ 15ರಿಂದ 20ರಷ್ಟು ಹೆಚ್ಚು ದರ ಇರುತ್ತದೆ. ಮಣ್ಣು, ಅಷ್ಟ ಗಂಧ, ಜಲ ವರ್ಣ ಬಳಸಿ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ತಯಾರಿಸುತ್ತೇವೆ’ ಎಂದರು.

‘ಕಳೆದ ವರ್ಷ ವಿವೇಕಾನಂದ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ‘ಎಐ’ ಗಣೇಶ ಮೂರ್ತಿ ಬಹಳ ಆಕರ್ಷಕವಾಗಿತ್ತು. ಈ ವರ್ಷ ಮನೆಯಲ್ಲಿ ‘ಎಐ’ ಗಣೇಶ ಮೂ‌ರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿ ತಿಂಗಳ ಹಿಂದೆಯೇ ‘ಆರ್ಡರ್‌’ ಮಾಡಿದ್ದೇನೆ. ಈಗ ‘ಎಐ’ ಗಣೇಶ ಮೂರ್ತಿ ಟ್ರೆಂಡಿಂಗ್‌ನಲ್ಲಿದೆ’ ಎಂದು ಧಾರವಾಡದ ಎಂ.ಆರ್‌. ನಗರದ ವ್ಯಾಪಾರಿ ಶ್ರೀಪಾದ ಹೊನ್ನೂರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.