ADVERTISEMENT

ಧಾರವಾಡ: ಸಾಂಸ್ಕೃತಿಕ ಭವನ ನನೆಗುದಿಗೆ

ಪಂಡಿತ ಬಸವರಾಜ ರಾಜಗುರು ಸ್ಮರಣಾರ್ಥ ನಿರ್ಮಾಣಕ್ಕೆ ಯೋಜನೆ; ಆರಂಭವಾಗದ ಕಾಮಗಾರಿ

ಬಿ.ಜೆ.ಧನ್ಯಪ್ರಸಾದ್
Published 4 ಡಿಸೆಂಬರ್ 2025, 4:30 IST
Last Updated 4 ಡಿಸೆಂಬರ್ 2025, 4:30 IST
ಧಾರವಾಡದ ಡಿ.ಸಿ. ಕಾಂಪೌಂಡ್‌ ಅಕ್ಕನ ಬಳಗದ ಪಕ್ಕದ ಜಾಗದಲ್ಲಿರುವ ಬಸವರಾಜ ರಾಜಗುರು ಸಾಂಸ್ಕೃತಿಕ ಭವನದ ಶಿಲಾನ್ಯಾಸ ಫಲಕ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಡಿ.ಸಿ. ಕಾಂಪೌಂಡ್‌ ಅಕ್ಕನ ಬಳಗದ ಪಕ್ಕದ ಜಾಗದಲ್ಲಿರುವ ಬಸವರಾಜ ರಾಜಗುರು ಸಾಂಸ್ಕೃತಿಕ ಭವನದ ಶಿಲಾನ್ಯಾಸ ಫಲಕ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ   

ಧಾರವಾಡ: ಹಿಂದೂಸ್ತಾನಿ ಸಂಗೀತ ಕಲಾವಿದ ಪಂಡಿತ ಬಸವರಾಜ ರಾಜಗುರು ಸ್ಮರಣಾರ್ಥ ಸಾಂಸ್ಕೃತಿಕ ಭವನ ನಿರ್ಮಿಸಲು ಬಿಡುಗಡೆಯಾಗಿರುವ ₹1.5 ಕೋಟಿ ಅನುದಾನ ಈವರೆಗೆ ಬಳಕೆಯಾಗಿಲ್ಲ. ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ 15 ವರ್ಷ ಗತಿಸಿದರೂ ಕಾಮಗಾರಿ ಆರಂಭವಾಗಿಲ್ಲ.

ರಾಜ್ಯ ಸರ್ಕಾರವು 2010 ಏಪ್ರಿಲ್‌ 16ರಂದು ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿತು. ಸ್ಮಾರಕ ನಿರ್ಮಿಸಲು ₹1 ಕೋಟಿ ಅನುದಾನ ಬಿಡುಗಡೆಗೊಳಿಸಿತ್ತು. ಡಿ.ಸಿ. ಕಾಂಪೌಂಡ್‌ನ ಅಕ್ಕನ ಬಳಗ ಭವನದ ಬಳಿ ಕಟ್ಟಡ ನಿರ್ಮಿಸಲು 2010 ನವೆಂಬರ್‌ 25ರಂದು ಭೂಮಿಪೂಜೆ ನೆರವೇರಿಸಲಾಗಿತ್ತು. ಈಗ ಶಿಲಾನ್ಯಾಸ ಫಲಕದ ಸುತ್ತಲೂ ಗಿಡಗಂಟಿ, ಪೊದೆಗಳು ಬೆಳೆದಿವೆ.

ಸಾಂಸ್ಕೃತಿಕ ಭವನದ ನೀಲನಕ್ಷೆಯಂತೆ, ಎರಡು ಅಂತಸ್ತಿನ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ, ಗ್ರಂಥಾಲಯ, ಸ್ಟುಡಿಯೊ, ಕಚೇರಿ, ಅತಿಥಿ ಕೊಠಡಿ, ಸಭಾಂಗಣ ನಿರ್ಮಿಸಲು ಉದ್ದೇಶಿಸಲಾಗಿತ್ತು. 2022–23ನೇ ಸಾಲಿನಲ್ಲಿ ಭವನಕ್ಕೆ ಹೆಚ್ಚುವರಿಯಾಗಿ ₹50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಜಾಗದ ವಿಚಾರದಲ್ಲಿ ತೊಡಕು ಉಂಟಾದ ಕಾರಣ ಭವನ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ.

ADVERTISEMENT

‘ಸಾಂಸ್ಕೃತಿಕ ಭವನ ನಿರ್ಮಾಣ ನಿಟ್ಟಿನಲ್ಲಿ ಅಕ್ಕನ ಬಳಗ ಸಮೀಪ ಗುರುತಿಸಿದ್ದ ಜಾಗದ ವಿಚಾರದಲ್ಲಿ ತಕರಾರು ಉಂಟಾಗಿದ್ದರಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈಗ ರಂಗಾಯಣ ಭಾಗದಲ್ಲಿ ಭವನ ನಿರ್ಮಿಸಲು ಕ್ರಮವಹಿಸುವುದಾಗಿ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ಭವನ ನಿರ್ಮಿಸಲು ತ್ವರಿತವಾಗಿ ಕ್ರಮವಹಿಸಬೇಕು’ ಎಂದು ಬಸವರಾಜ ರಾಜಗುರು ಟ್ರಸ್ಟ್‌ ಸದಸ್ಯ ನಿಜಗುಣಿ ರಾಜಗುರು ಒತ್ತಾಯಿಸಿದರು.

ಸಾಂಸ್ಕೃತಿಕ ಭವನ ನಿರ್ಮಾಣವಾದರೆ ಟ್ರಸ್ಟ್‌ ವತಿಯಿಂದ ಸಂಗೀತ, ಗಾಯನ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಲು, ಬಸವರಾಜ ರಾಜಗುರು ಅವರ ಸಂಗೀತ ಪರಂಪರೆ, ಧಾರವಾಡದ ಕಲಾ ಸಿರಿಯನ್ನು ಯುವ ಪೀಳಿಗೆಗೆ ಪ‌ರಿಚಯಿಸಲು ಅನುಕೂಲವಾಗಲಿದೆ ಎಂಬುದು ಟ್ರಸ್ಟ್‌ನವರ ಆಶಯ. 

‘ರಂಗಾಯಣದ ಬಳಿ ನಿರ್ಮಾಣ’

‘ಬಸವರಾಜ ರಾಜಗುರು ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ರಂಗಾಯಣದ ಬಯಲು ರಂಗಮಂದಿರ ಭಾಗದಲ್ಲಿ ಜಾಗ ಗುರುತಿಸಲಾಗಿದೆ. ಬೆಂಗಳೂರಿನ ವಾಸ್ತುಶಿಲ್ಪಿಯೊಬ್ಬರಿಗೆ ಕಟ್ಟಡ ವಿನ್ಯಾಸ ಸಿದ್ದಪಡಿಸಲು ತಿಳಿಸಿದ್ದೇವೆ. ₹4 ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗುವುದು’ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.