ಧಾರವಾಡ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಯಾಗಿರುವ ನೌಕರರು ಕಡ್ಡಾಯವಾಗಿ ಸಮೀಕ್ಷೆಗೆ ಹಾಜರಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ಮತ್ತು ಉದಾಸೀನ ತೋರುವವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೇಲ್ವಿಚಾರಕರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸಮೀಕ್ಷೆಯಲ್ಲಿ ಆರಂಭಿಕವಾಗಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದರೂ ತಾಂತ್ರಿಕ ಸಮಾಲೋಚಕರು ಪರಿಹರಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಹೊಸ 3.5 ಆ್ಯಪ್ ಬಿಡುಗಡೆ ಮಾಡಿದೆ, ಈಗ ಒಟಿಪಿ ಸಮಸ್ಯೆ ಇಲ್ಲ. ಸಮೀಕ್ಷಾ ಕಾರ್ಯದಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ಸಾಧನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಯೋಜನೆಯಾಗಿರುವ ನೌಕರರು ಸಮೀಕ್ಷೆಯಿಂದ ವಿಮುಖವಾಗುವಂತಿಲ್ಲ. ವಿನಾಯಿತಿ ನೀಡಿರುವವರನ್ನು (ಅನಾರೋಗ್ಯಪೀಡಿತರು, ಅಂಗವಿಕಲರು, ಗರ್ಭಿಣಿಯರು...) ಹೊರತಾಗಿ ಉಳಿದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಮೇಲ್ವಿಚಾರಕರು ಸಮೀಕ್ಷೆದಾರರಿಗೆ ಉಂಟಾಗುವ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಅಥವಾ ತಹಶೀಲ್ದಾರ್, ತಾಂತ್ರಿಕ ಸಮಾಲೋಚಕರ ನೆರವಿನಿಂದ ಪರಿಹರಿಸಬೇಕು ಎಂದರು.
ಸಮೀಕ್ಷಕರು ಸಮೀಕ್ಷೆಯಲ್ಲಿ ನಿರಾಸಕ್ತಿ ತೋರುವುದು ಅಥವಾ ಕ್ಷೇತ್ರ ಭೇಟಿ ನೀಡದಿರುವುದು, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವುದು, ಅನಗತ್ಯ ನೆಪಗಳನ್ನು ಹೇಳಿ ಉದಾಸೀನ ಮಾಡಿದರೆ ತಕ್ಷಣ ಮೇಲ್ವಿಚಾರಕರು ತಹಶೀಲ್ದಾರ್ ಹಾಗೂ ಸಮೀಕ್ಷೆದಾರರ ಇಲಾಖೆಯ ಮುಖ್ಯಸ್ಥರಿಗೆ ಲಿಖಿತವಾಗಿ ವರದಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಂದಾಜು 5.46 ಲಕ್ಷ ಮನೆಗಳಿವೆ. ಸಮೀಕ್ಷೆಗಾಗಿ 4,886 ಬ್ಲಾಕ್ ರಚಿಸಲಾಗಿದೆ. 4,671 ಸಮೀಕ್ಷಕರು, 208 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಅಕ್ಟೋಬರ್ 7 ರೊಳಗಾಗಿ ಎಲ್ಲ ಕುಟುಂಬಗಳನ್ನು ಸಮೀಕ್ಷೆ ಮಾಡಬೇಕು ಎಂದರು.
ಸಮೀಕ್ಷಕರಿಗೆ ಸಮೀಕ್ಷೆಗೆ ಅನುಕೂಲವಾಗುವಂತೆ ಯುಎಚ್‍ಐಡಿ ಸಂಖ್ಯೆ ಇರುವ ಹಾಗೂ ಪಟ್ಟಿ ಮಾಡಿರುವ ಸಮೀಕ್ಷಾ ಮನೆಗಳ ವಿವರದ ಪಟ್ಟಿಯನ್ನು ಸಮೀಕ್ಷಕರಿಗೆ ಒದಗಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪ್ರತಿ ದಿನ ಎಲ್ಲ ಸಮೀಕ್ಷಕರಿಗೆ ಮೇಲ್ವಿಚಾರಕರ ಮೂಲಕ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿಕೊಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಭಾನುಮತಿ ಎಚ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.