ADVERTISEMENT

ದೀಪಾವಳಿ: ಮಣ್ಣಿನ ಹಣತೆಯ ಮೆರಗು 

ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಹಣತೆ ಮಾರಾಟ, ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:54 IST
Last Updated 19 ಅಕ್ಟೋಬರ್ 2025, 6:54 IST
ಧಾರವಾಡದ ಮಾರುಕಟ್ಟೆಯಲ್ಲಿ ಗ್ರಾಹಕರು ಮಣ್ಣಿನ ಹಣತೆಗಳನ್ನು ಖರೀದಿಸಿದರು
ಧಾರವಾಡದ ಮಾರುಕಟ್ಟೆಯಲ್ಲಿ ಗ್ರಾಹಕರು ಮಣ್ಣಿನ ಹಣತೆಗಳನ್ನು ಖರೀದಿಸಿದರು   

ಧಾರವಾಡ: ದೀಪಾವಳಿ ಸಡಗರ ಹೆಚ್ಚಿಸಲು ವಿವಿಧ ಬಗೆಯ ಆಲಂಕಾರಿಕ ಹಣತೆಗಳು ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

ಸೂಪರ್ ಮಾರುಕಟ್ಟೆ, ಸುಭಾಷ ರಸ್ತೆ, ಟಿಕಾರೆ ರಸ್ತೆ, ಸಪ್ತಾಪುರ, ಶ್ರೀನಗರ, ಕುಂಬಾರ ಓಣಿ, ಸಿಬಿಟಿ, ಅಕ್ಕಿಪೇಟೆ, ರೈಲುನಿಲ್ದಾಣ ರಸ್ತೆ, ಬಸ್‌ನಿಲ್ದಾಣ ಸೇರಿದಂತೆ ವಿವಿಧೆಡೆ ರಸ್ತೆ ಬದಿಗಳಲ್ಲಿ ತರಹೇವಾರಿ ಹಣತೆಗಳು ಮಾರಾಟಕ್ಕೆ ಇಡಲಾಗಿದೆ. ದರ ತುಸು ಹೆಚ್ಚಾಗಿದ್ದರೂ, ಜನರು ಖುಷಿಯಿಂದಲೇ ಖರೀದಿಯಲ್ಲಿ ತೊಡಗಿದ್ದಾರೆ. 

ವಿವಿಧ ಬಗೆಯ ಹಣತೆ: ತೆಂಗಿನ ಕಾಯಿ ಮಾದರಿ, ತಟ್ಟೆ, ಹೂವು, ಗೊಂಬೆಯಾಕಾರ, ನವಿಲು ಮಾದರಿ ಹಣತೆ, ಅಲ್ಲಾವುದ್ದೀನ್‌ ಹಣತೆ, ಗಾಜಿನ ಹಣತೆ, ಒಂದು ದೀಪದಲ್ಲಿ 2 ಹಾಗೂ 5 ಕಡೆ ಬತ್ತಿ ಹಾಕಬಹುದಾದ ವಿನ್ಯಾಸದ ಹಣತೆ, ಲ್ಯಾಂಪ್ ರೀತಿಯ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. 

ADVERTISEMENT

ಚಿಕ್ಕ ಹಣತೆ ಡಜನ್‌ಗೆ ₹30 , ಮಧ್ಯಮ ಗಾತ್ರದ್ದು ₹40, ದೊಡ್ಡವು ಜೋಡಿಗೆ ₹50, ತೆಂಗಿನಕಾಯಿ ಮಾದರಿಯವು ಜೋಡಿಗೆ ₹50, ಗಾಜಿನ ಹಣತೆ ಜೋಡಿಗೆ ₹60, ಲ್ಯಾಂಪ್ ಮಾದರಿಯವು ಜೋಡಿಗೆ ₹150, ನವಿಲು ಮಾದರಿ ಜೋಡಿಗೆ ₹120, ಗೊಂಬೆ ಮಾದರಿ ಜೋಡಿಗೆ ₹150 ದರ ಇದೆ. 

‘ಮಾರುಕಟ್ಟೆಯಲ್ಲಿ ತರಹೇವಾರಿ  ಪ್ಲಾಸ್ಟಿಕ್ ಹಣತೆಗಳು, ಎಲ್‍ಇಡಿ ದೀಪಗಳ ನಡುವೆಯೂ ಮಣ್ಣಿನ ಹಣತೆಗಳ ವ್ಯಾಪಾರ ಮಾಡುತ್ತಿದ್ದೇವೆ. ಕೈಯಲ್ಲಿ ತಯಾರಿಸಿರುವ ಹಣತೆಗಿಂತ ಯಂತ್ರದಲ್ಲಿ ಅಚ್ಚಾಗಿರುವ ಹಣತೆಗಳಿಗೆ ಬೇಡಿಕೆ ಇದೆ. ಆದ್ದರಿಂದ, ತಮಿಳುನಾಡಿನಿಂದ ಏಜೆಂಟರ ಮೂಲಕ ಹಣತೆಗಳನ್ನು ತರಿಸಿ ಮಾರಾಟ ಮಾಡುತ್ತಿದ್ದೇವೆ. ಹೀಗಾಗಿ, ಸ್ವಲ್ಪ ಬೆಲೆ ಹೆಚ್ಚಿದೆ. ತಕ್ಕಮಟ್ಟಿಗೆ ವ್ಯಾಪಾರ ನಡೆಯುತ್ತಿದೆ’ ಎಂದು ವ್ಯಾಪಾರಿ ಬಸವರಾಜ ಕುಂಬಾರ ತಿಳಿಸಿದರು.

‘ದೀಪಾವಳಿ ಪವಿತ್ರವಾದ ಹಬ್ಬ. ಮನೆ, ಮನ ಬೆಳಗಿಸಿ ಲಕ್ಷ್ಮಿದೇವತೆ ಪೂಜಿಸುವ ಹಬ್ಬ. ಮಾರುಕಟ್ಟೆಯಲ್ಲಿ ತರಹೇವಾರಿ ಪ್ಲಾಸ್ಟಿಕ್, ಎಲ್‍ಇಡಿ ಹಣತೆಗಳು ಬಂದಿವೆ. ಮಣ್ಣಿನ ಹಣತೆಗಳಿಗೆ ಹೋಲಿಸಿದರೆ ಅವುಗಳ ಬೆಲೆ ದುಬಾರಿ. ಮಣ್ಣಿನ ಹಣತೆಗಳಿಂದ ಮನೆಯೆಲ್ಲ ಅಲಂಕರಿಸಿದರೆ ಅದಕ್ಕೆ ವಿಶೇಷ ಮೆರುಗು ಬರುತ್ತದೆ’ ಎಂದು ಗ್ರಾಹಕಿ ಗೌರಮ್ಮ ಕಮ್ಮಾರ ತಿಳಿಸಿದರು.

ಧಾರವಾಡದ ಮಾರುಕಟ್ಟೆಯಲ್ಲಿ ಗ್ರಾಹಕರು ಮಣ್ಣಿನ ಹಣತೆಗಳನ್ನು ಖರೀದಿಸಿದರು
ಹಲವು ವರ್ಷಗಳಿಂದ ಮಣ್ಣಿನ ಹಣತೆಗಳ ಮಾರಾಟ ಮಾಡುತ್ತಿದ್ದೇನೆ. ತಮಿಳುನಾಡಿನ ಸಣ್ಣ ಗಾತ್ರದ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಾಳೆ ವ್ಯಾಪಾರ ಹೆಚ್ಚಾಗುವ ನಿರೀಕ್ಷೆ ಇದೆ.
– ಮಹಾದೇವಪ್ಪ ಕುಂಬಾರ, ಹೆಬ್ಬಳ್ಳಿ
ಈ ಬಾರಿ ಮಣ್ಣಿನ ಹಣತೆಗಳನ್ನು ಬೆಳಗಿಸಿ ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ. ಕೈಯಲ್ಲಿ ತಯಾರಿಸಿರುವ ಹಣತೆಗಿಂತ ಯಂತ್ರದಲ್ಲಿ ಅಚ್ಚಾಗಿರುವ ಹಣತೆಗಳು ಆಕರ್ಷಕವಾಗಿವೆ.
– ಸವಿತಾ ಪಾಟೀಲ, ಸ್ಥಳೀಯ ಗ್ರಾಹಕಿ
ಕುಂಬಾರರ ಕಸುಬಿಗೆ ಹೊಡೆತ
ದೀಪಾವಳಿ ಹಬ್ಬದಲ್ಲಿ ಪ್ರತಿ ಮನೆಯಲ್ಲೂ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತವೆ. ಕುಂಬಾರ ಸಮುದಾಯಕ್ಕೆ ವರ್ಷದ ಅತಿ ದೊಡ್ಡ ವ್ಯಾಪಾರದ ಸಮಯ. ಎರಡು ತಿಂಗಳು ಮುಂಚೆಯೇ ಹಿರಿಯರಿಂದ ಮಕ್ಕಳವರೆಗೆ ಇಡೀ ಕುಟುಂಬವು ಜೇಡಿಮಣ್ಣಿನಿಂದ ವಿವಿಧ ಆಕಾರದ ಹಣತೆಗಳನ್ನು ತಯಾರಿಸಿ ಸುಟ್ಟು ಬಣ್ಣ ಹಾಕಿ ಹಣತೆಗಳನ್ನು ಮಾರುಕಟ್ಟೆಗೆ ತರುತ್ತಾರೆ. ‘ಹಲವು ವರ್ಷಗಳಿಂದ ಮಣ್ಣಿನ ಹಣತೆಗಳಿಗೆ ದೊಡ್ಡ ಪೈಪೋಟಿ ಎದುರಾಗಿದ್ದು. ಪಿಒಪಿ ಹಣತೆಗಳು ಚಿತ್ತಾಕರ್ಷಕ ಪ್ಲಾಸ್ಟಿಕ್ ಹಣತೆಗಳು ಲಗ್ಗೆ ಇಟ್ಟಿರುವುದು ಕುಂಬಾರರ ಕಸುಬಿಗೆ ಹೊಡೆತ ಬಿದ್ದಿದೆ’ ಎಂದು ಕುಂಬಾರರು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.