ADVERTISEMENT

UPSC ಫಲಿತಾಂಶ: NWKRTC ಕಂಡಕ್ಟರ್‌ ಮಗ ಸಿದ್ಧಲಿಂಗಪ್ಪ ಕೆ. ಪೂಜಾರಗೆ 589ನೇ ರ್‍ಯಾಂಕ್

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಎಂಜಿನಿಯರ್‌ ಸಿದ್ಧಲಿಂಗಪ್ಪ ಕೆ. ಪೂಜಾರ

​ಪ್ರಜಾವಾಣಿ ವಾರ್ತೆ
Published 24 ಮೇ 2023, 11:07 IST
Last Updated 24 ಮೇ 2023, 11:07 IST
ಸಿದ್ಧಲಿಂಗಪ್ಪ ಪೂಜಾರ
ಸಿದ್ಧಲಿಂಗಪ್ಪ ಪೂಜಾರ   

ಧಾರವಾಡ: ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪೂರೈಸಿ, ಕನ್ನಡ ವಿಷಯವನ್ನೇ ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡ ಅಣ್ಣಿಗೇರಿಯ ಎಂಜಿನಿಯರ್‌ ಸಿದ್ಧಲಿಂಗಪ್ಪ ಕೆ. ಪೂಜಾರ ಅವರು ಕೇಂದ್ರ ಲೋಕಸೇವಾ ಆಯೋಗ 2022ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 589ನೇ ರ‍್ಯಾಂಕ್ ಪಡೆದಿದ್ದಾರೆ.

ತಂದೆ ಕರಿಸಿದ್ದಪ್ಪ ಪೂಜಾರ ಅವರು ಹುಬ್ಬಳ್ಳಿಯಲ್ಲಿ NWKRTC ನಿರ್ವಾಹಕರಾಗಿದ್ದಾರೆ. ತಾಯಿ ಶಾಂತವ್ವ ಹೊಲದ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಅಣ್ಣಿಗೇರಿಯಲ್ಲಿ ಮೂರು ಎಕರೆ ಜಮೀನು ಹೊಂದಿದ್ದಾರೆ.

ಕನ್ನಡ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಸಿದ್ಧಲಿಂಗಪ್ಪ ಬೆಂಗಳೂರಿನ ಯುವಿಸಿಇ ಕಾಲೇಜಿನಲ್ಲಿ 2015ರಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ನಿರಂತರ ಸಿದ್ಧತೆ ನಡೆಸಿದ್ದರು. ಅವರು ಒಂದು ಬಾರಿ ಯುಪಿಎಸ್‌ಸಿ ಸಂದರ್ಶನವನ್ನೂ ನೀಡಿದ್ದರು.

ADVERTISEMENT

ಅಣ್ಣಿಗೇರಿಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಾಲಾ ಶಿಕ್ಷಣ ಪೂರೈಸಿರುವ ಸಿದ್ಧಲಿಂಗಪ್ಪ, ದ್ವಿತೀಯ ಪಿಯುಸಿಯನ್ನು ಧಾರವಾಡದ ಜೆಎಸ್‌ಎಸ್‌ನಲ್ಲಿ ಪೂರ್ಣಗೊಳಿಸಿದ್ದಾರೆ. 

‘ಬೆಂಗಳೂರಿನ ಇನ್‌ಸೈಟ್‌, ಐಎಎಸ್‌ ಬಾಬಾ, ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದೇನೆ. ಅದರ ಮುಖ್ಯಸ್ಥರು ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಕನ್ನಡ ವಿಷಯದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ನನಗೆ ಮಾರ್ಗದರ್ಶನ ಮಾಡಿದರು. ಸರ್ಕಾರಿ ಸೇವೆಯ ಮೂಲಕ ಜನರ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಸಿದ್ಧಲಿಂಗಪ್ಪ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.