
ಧಾರವಾಡ: ‘ಶಿಕ್ಷಣವು ಬೌದ್ಧಿಕ ದಾಸ್ಯದಿಂದ ಬಿಡುಗಡೆ ಮಾಡುತ್ತದೆ. ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿ, ಸತ್ಯವನ್ನು ಹೇಳುವ ಧೈರ್ಯ ನೀಡುತ್ತದೆ. ಬಿ.ಆರ್.ಅಂಬೇಡ್ಕರ್ ಅವರು ಅಂಥ ಶಿಕ್ಷಣವನ್ನು ಬಯಸಿದ್ದರು’ ಎಂದು ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಲೂರು ವೆಂಕಟರಾವ್ ಭವನದಲ್ಲಿ ಮಂಗಳವಾರ ನಡೆದ ಕೋಮುವಾದ ಅಳಿಸಿ-ಸಂವಿಧಾನ ಉಳಿಸಿ ಜಾಗೃತ ಪ್ರಜ್ಞೆಯ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರೂ ಮೂಢನಂಬಿಕೆಗಳನ್ನು ಧಿಕ್ಕರಿಸಬೇಕು. ಧೈರ್ಯ ಹಾಗೂ ಅಂತಃಸತ್ವವನ್ನು ಬೆಳೆಸಿಕೊಳ್ಳಬೇಕು’ ಎಂದರು.
‘ಕೋಮುವಾದಕ್ಕೆ ಬಹುರೂಪವಿದೆ. ಅದಕ್ಕೆ ಮನುವಾದ, ಜಾತೀಯತೆ, ಲಿಂಗಭೇದ ಸೇರಿಸಿ ಸಮಗ್ರ ರೀತಿಯಲ್ಲಿ ಹೋರಾಟ ಮಾಡಿದರೆ ಮಾತ್ರ ಕೋಮುವಾದ ಅಳಿಸಲು ಸಾಧ್ಯವಿದೆ. ಅದಕ್ಕೆ ಜಾಗೃತಿ ಅಗತ್ಯ ಇದೆ’ ಎಂದು ತಿಳಿಸಿದರು.
‘ಅಂಬೇಡ್ಕರ್ ಅವರ ಚಿಂತನೆಗಳನ್ನು ಓದಬೇಕು. ಮನನ ಮಾಡಿಕೊಳ್ಳಬೇಕು. ಮಕ್ಕಳಿಗೆ ಅದನ್ನು ತಿಳಿಸಬೇಕು. ಆಗ ಮಾತ್ರ ವ್ಯಕ್ತಿತ್ವ ಗಟ್ಟಿಗೊಳ್ಳುತ್ತದೆ. ಕೋಮುವಾದ ಅಳಿಸಿ ಸಂವಿಧಾನ ಉಳಿಸಲು ಸಾಧ್ಯವಾಗುತ್ತದೆ’ ಎಂದರು.
ನಿವೃತ್ತ ಪ್ರಾಧ್ಯಾಪಕ ಸಣ್ಣರಾಮ ಮಾತನಾಡಿ, ‘ಮೂಢನಂಬಿಕೆಗಳನ್ನು ಹೋಗಲಾಡಿಸಿ ಸರ್ವರೂ ಸಮಾನತೆಯಿಂದ ಬದುಕುವಂತಾಗಬೇಕು ಎನ್ನುವುದು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಆಶಯವಾಗಿತ್ತು. ಆ ಮಹನೀಯರ ಚಿಂತನೆಗಳನ್ನು ಪ್ರೊ.ಬಿ.ಕೃಷ್ಣಪ್ಪ ಅವರು ಅಳವಡಿಸಿಕೊಂಡರು. ಖಾಸಗಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಪ್ರೊ.ಬಿ.ಕೃಷ್ಣಪ್ಪ ಅವರು ಹೋರಾಟ ಆರಂಭಿಸಿದರು. ಅದನ್ನು ನಾವೆಲ್ಲರೂ ಮುಂದುವರೆಸಬೇಕು’ ಎಂದು ಹೇಳಿದರು.
‘ಕೋಮುವಾದ ಎಂಬುವುದು ಜಾತಿ ಹಾಗೂ ಚತುರ್ವರ್ಣ ವ್ಯವಸ್ಥೆ ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾಗದಿದ್ದರೆ ಸಮಸ್ಯೆಗಳ ನಿವಾರಣೆ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ ಕಾಕರಗಲ್, ರಮೇಶ ಭಜಂತ್ರಿ, ಎಸ್. ಫಕ್ಕೀರಪ್ಪ ಮುಂಡಗೋಡ, ಬಿ.ಎನ್.ಗಂಗಾಧರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.