ಹುಬ್ಬಳ್ಳಿ: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಂದ ಸದಾ ಗಿಜುಗುಡುತ್ತಿದ್ದ ಧಾರವಾಡ, ಈಗ ಬಣಗುಟ್ಟುತ್ತಿದೆ. ಎರಡು ವರ್ಷದಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದ ಕಾರಣ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಧಾರವಾಡ ತೊರೆದು, ತಮ್ಮೂರಿಗೆ ಹೊರಟಿದ್ದಾರೆ.
ಧಾರವಾಡಕ್ಕೆ ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್, ಕಲಬುರಗಿ, ಬಳ್ಳಾರಿ, ಹೊಸಪೇಟೆ ಸೇರಿ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಉನ್ನತ ವ್ಯಾಸಾಂಗ ಮತ್ತು ಸರ್ಕಾರಿ ನೌಕರಿಗಾಗಿ ತರಬೇತಿ ಪಡೆಯಲು ಇಲ್ಲಿ ಬರುತ್ತಾರೆ. ಬಹುತೇಕರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡೇ ಧಾರವಾಡ ಬಿಡುತ್ತಾರೆ.
ಒಳಮೀಸಲಾತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ಹುದ್ದೆಗಳ ಅಧಿಸೂಚನೆಗೆ ಸರ್ಕಾರ ತಡೆಯೊಡ್ಡಿದ್ದರಿಂದ ಎರಡು ವರ್ಷಗಳಿಂದ ಯಾವುದೇ ನೇಮಕಾತಿ ಆಗದೆ, ಉದ್ಯೋಗಾಕಾಂಕ್ಷಿಗಳು ನಿರಾಸೆಗೊಂಡಿದ್ದಾರೆ. ನಗರದಲ್ಲಿ ಇರುವ 500ಕ್ಕೂ ಹೆಚ್ಚು ಬಾಡಿಗೆ ಕೊಠಡಿಗಳು (ಪಿ.ಜಿ), 300ಕ್ಕೂ ಹೆಚ್ಚು ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹೆಚ್ಚಿರುತ್ತಿದ್ದರು. ಆದರೆ, ಈಗ ಅವು ಬರಿದಾಗುತ್ತಿವೆ. ಕೆಲವು ಮುಚ್ಚುವ ಭೀತಿಯಲ್ಲಿವೆ.
‘ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಧಾರವಾಡದಲ್ಲಿ ಎರಡು ವರ್ಷಗಳಿಂದ ಇದ್ದೇನೆ. ಪ್ರತಿ ತಿಂಗಳು ಖರ್ಚಿಗೆ ಕನಿಷ್ಠ ₹6 ಸಾವಿರ ಬೇಕು. ಮನೆಯಲ್ಲಿ ಬಡತನ. ನೌಕರಿ ಗಿಟ್ಟಿಸುವ ಮತ್ತು ಅದಕ್ಕೆ ತರಬೇತಿ ಪಡೆಯುವ ಉದ್ದೇಶದಿಂದ ಇಲ್ಲಿಗೆ ಬಂದೆ. ನನ್ನ ಬಳಿಯಿದ್ದ ಹಣವೆಲ್ಲ ಖಾಲಿ ಆಗಿದೆ. ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆಯೂ ಇಲ್ಲ. ಅನಿವಾರ್ಯವಾಗಿ ಓದು ಬಿಟ್ಟು, ಯಾವುದಾದರೂ ಕೆಲಸ ಮಾಡಿ ಸಾಲ ತೀರಿಸಬೇಕಿದೆ’ ಎಂದು ಬಾಗಲಕೋಟೆಯ ಸುರೇಶ ಬಿರಾದಾರ ನೋವಿನಿಂದ ತಿಳಿಸಿದರು.
‘ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಂದ ಈ ಹಿಂದೆ ಗ್ರಂಥಾಲಯ ತುಂಬಿರುತಿತ್ತು. ಕೆಲವೊಮ್ಮೆ ಜಾಗ ಇಲ್ಲದ್ದಕ್ಕೆ ನೆಲದ ಮೇಲೆ ಕೂತು ಓದಿದ್ದೂ ಇದೆ. ಆದರೆ, ಈಗ ದಿನದಿಂದ ದಿನಕ್ಕೆ ಗ್ರಂಥಾಲಯ ಬಿಡುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ಧಾರವಾಡದ ಬಸವಶ್ರೀ 24X7 ಗ್ರಂಥಾಲಯದ ವ್ಯವಸ್ಥಾಪಕ ಹಣಮಂತ ತಳವಾರ ತಿಳಿಸಿದರು.
‘ಕೆಎಎಸ್, ಪಿಎಸ್‌ಐ, ಎಫ್‌ಡಿಎ ಸೇರಿ ವಿವಿಧ ಇಲಾಖೆಗಳ ಪರೀಕ್ಷೆಗೆ ತರಬೇತಿ ನೀಡುತ್ತಿದ್ದೇವೆ. 24x7 ಗ್ರಂಥಾಲಯದ ಸೌಲಭ್ಯವೂ ಇದೆ. ರಾಜ್ಯ ಸರ್ಕಾರದ ಯಾವುದೇ ಇಲಾಖೆಗಳ ಹುದ್ದೆಗಳಿಗೆ ನೇಮಕಾತಿ ಆಗದ ಕಾರಣ ಎರಡು ವರ್ಷಗಳಿಂದ ಅಕಾಡೆಮಿಯಲ್ಲಿ ತರಬೇತಿಗೆ ಪ್ರವೇಶ ಪಡೆಯುವವರ ಸಂಖ್ಯೆ ಕುಸಿದಿದೆ. ಬಹುತೇಕ ತರಬೇತಿ ಕೇಂದ್ರಗಳು ಇಂಥದ್ದೇ ಸ್ಥಿತಿ ಎದುರಿಸುತ್ತಿವೆ. ಎಲ್ಲದೆ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ’ ಎಂದು ಧಾರವಾಡದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಇದ್ದರೆ. ಹುದ್ದೆಗಳು ಶೀಘ್ರವೇ ಭರ್ತಿ ಆಗಬೇಕು.– ಎಸ್.ವಿ. ಸಂಕನೂರ, ವಿಧಾನಪರಿಷತ್ ಸದಸ್ಯ
ಎರಡು ವರ್ಷಗಳಿಂದ ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ ಆಗಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತರಬೇತಿ ಪಡೆದಿರುವವರು ನೌಕರಿ ನೇಮಕಾತಿ ನಿರೀಕ್ಷೆಯಲ್ಲಿ ಇದ್ದಾರೆ.– ಲಕ್ಷ್ಮಣ ಎಸ್. ಉಪ್ಪಾರ, ಸಂಸ್ಥಾಪಕ ನಿರ್ದೇಶಕ ಕ್ಲಾಸಿಕ್ ಸಮೂಹ ಸಂಸ್ಥೆಗಳು
ಪೊಲೀಸ್ ನೌಕರಿಗಾಗಿ ಮೂರು ವರ್ಷಗಳಿಂದ ಧಾರವಾಡದಲ್ಲಿ ಇದ್ದೇನೆ. ಪೊಲೀಸ್ ಹುದ್ದೆಗೆ ಅಗತ್ಯವಿರುವ ವಯೋಮಿತಿ ಮೀರುವ ಚಿಂತೆ ಕಾಡುತ್ತಿದೆ. ನೇಮಕಾತಿ ಪ್ರಕ್ರಿಯೆ ಶೀಘ್ರ ಆಗಬೇಕು.– ರಾಮಕುಮಾರ್, ಸ್ಪರ್ಧಾತ್ಮಕ ಪರೀಕ್ಷಾರ್ಥಿ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.