ADVERTISEMENT

ಧಾರವಾಡ: ಜಿಪಿಎಲ್‌ಎಫ್‌ ಸಹಾಯಕರ 8 ತಿಂಗಳ ಸಂಬಳ ಬಾಕಿ

ಬಿ.ಜೆ.ಧನ್ಯಪ್ರಸಾದ್
Published 6 ಮಾರ್ಚ್ 2025, 6:16 IST
Last Updated 6 ಮಾರ್ಚ್ 2025, 6:16 IST
ಭುವನೇಶ ದೇವಿದಾಸ್‌ ಪಾಟೀಲ
ಭುವನೇಶ ದೇವಿದಾಸ್‌ ಪಾಟೀಲ   

ಧಾರವಾಡ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಮಟ್ಟದ ಒಕ್ಕೂಟದ ಸಹಾಯಕರಾಗಿ (ಜಿಪಿಎಲ್‌ಎಫ್‌ಎ) ಕಾರ್ಯ ನಿರ್ವಹಿಸಿದವರಿಗೆ ಎಂಟು ತಿಂಗಳ ಸಂಬಳ ಬಾಕಿ ಇದೆ.

ಜಿಪಿಎಲ್‌ಎಫ್‌ ಸಹಾಯಕರನ್ನು ಕಳೆದ ನವೆಂಬರ್‌ನಲ್ಲಿ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವರ ಸಂಬಳ ಪಾವತಿಸಿಲ್ಲ.

ಜಿಪಿಎಲ್‌ಎಫ್‌ ಸಹಾಯಕರಿಗೆ ಸ್ವಸಹಾಯ ಸಂಘಗಳ (ಎಸ್‌ಎಚ್‌ಜಿ) ಹೆಸರು, ಸದಸ್ಯರು, ಬ್ಯಾಂಕ್‌ ಖಾತೆ ಸಂಖ್ಯೆ, ಆರ್ಥಿಕ ಸ್ಥಿತಿ ಇತ್ಯಾದಿ ವಿವರಗಳನ್ನು ಮ್ಯಾನೇಜ್‌ಮೆಂಟ್‌ ಇನ್ಫಾರ್ಮೆಷನ್‌ ಸಿಸ್ಟಂ (ಎಂಐಎಸ್‌) ಪೋರ್ಟಲ್‌ಗೆ ಅಪ್‌ಲೋಡ್‌ ಕೆಲಸ ವಹಿಸಲಾಗಿತ್ತು. ಈ ನೌಕರರಿಗೆ ದಿನಕ್ಕೆ ₹550 ಪಗಾರ ನಿಗದಿಪಡಿಸಲಾಗಿತ್ತು.

ADVERTISEMENT

‘ಜಿಪಿಎಲ್‌ಎಫ್‌ ಸಹಾಯಕನಾಗಿ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದೇನೆ. ರಜೆ ದಿನಗಳಂದೂ ಕೆಲಸ ಮಾಡಿದ್ದೇವೆ. ತಿಂಗಳಿಗೆ ಅಂದಾಜು ₹12 ಸಾವಿರವರೆಗೆ ಪಗಾರ ನೀಡುತ್ತಿದ್ದರು. ಕಳೆದ ನವೆಂಬರ್‌ನಲ್ಲಿ ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸಿದ್ಧಾರೆ. ಎಂಟು ತಿಂಗಳ ಸಂಬಳ, ಪ್ರಯಾಣ ಭತ್ಯೆ, ದಿನ ಭತ್ಯೆ ನೀಡಿಲ್ಲ. ಈಗ ನಿರುದ್ಯೋಗಿಯಾಗಿದ್ದೇನೆ, ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ನವಲಗುಂದದ ಜಿಪಿಎಲ್‌ಎಫ್‌ ಸಹಾಯಕ ನಾಗಲಿಂಗಪ್ಪ ಗುಳೇದ ಅಳಲು ತೋಡಿಕೊಂಡರು.

ಜಿಪಿಎಲ್‌ಎಫ್‌ ಸಹಾಯಕರು ಬಾಕಿ ಸಂಬಳಕ್ಕಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ಧಾರೆ. ಸಮಸ್ಯೆ ಪರಿಹಾರವಾಗಿಲ್ಲ. ಈಗ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಸಂಕಷ್ಟದಲ್ಲಿದ್ಧಾರೆ.

‘ಸರ್ಕಾರದ ಆದೇಶದಂತೆ ಜಿಪಿಎಲ್‌ಎಫ್‌ ಸಹಾಯಕರನ್ನು ವಜಾಗೊಳಿಸಿ, ಡಾಟಾ ಎಂಟ್ರಿ ಆಪರೇಟರ್‌ (ಡಿಇಒ) ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಪಿಎಲ್‌ಎಫ್‌ ಸಹಾಯಕರಾಗಿ ಕಾರ್ಯ ನಿರ್ವಹಿಸಿದವರು ಡಿಇಒ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ ಇದ್ದರೆ ನೇಮಕಕ್ಕೆ ಅವಕಾಶ ಇದೆ’ ಎಂದು ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ವಿನೋದ ಕಂಠಿ ತಿಳಿಸಿದರು.

ಜಿಪಿಎಲ್‌ಎಫ್‌ ಸಹಾಯಕರ ಸಂಬಳದ ಬಿಲ್‌ ಖಜಾ‌ನೆಗೆ ಕಳುಹಿಸಲಾಗಿದೆ. ಇನ್ನೊಂದು ವಾರದಲ್ಲಿ ಅವರಿಗೆ ಸಂಬಳ ಪಾವತಿಯಾಗಲಿದೆ‌
ಭುವನೇಶ ಪಾಟೀಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.