ಧಾರವಾಡದ ಕೋರ್ಟ್ ಸರ್ಕಲ್‌ನಲ್ಲಿ ಗ್ರಂಥಾಲಯದ ಎದುರುಗಡೆ ಗ್ರಾಮ ವಿಕಾಸ ಸಂಸ್ಥೆಯಿಂದ ಉಚಿತವಾಗಿ ಊಟ ವಿತರಿಸಲಾಯಿತು
ಹುಬ್ಬಳ್ಳಿ: ಬಡವರು, ನಿರ್ಗತಿಕರು, ಪೌರ ಕಾರ್ಮಿಕರು, ಶಾಲಾ– ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಹಸಿದವರಿಗೆ ನಿತ್ಯ ಒಂದು ಹೊತ್ತು ಉಚಿತವಾಗಿ ಊಟ ನೀಡುವ ಮೂಲಕ ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ ಧಾರವಾಡದ ಗ್ರಾಮ ವಿಕಾಸ ಸಂಸ್ಥೆ.
‘ಹಸಿದವರಿಗೆ ಉಚಿತ ಆಹಾರ’ ಪರಿಕಲ್ಪನೆ ಅಡಿ ಕಳೆದ 10 ತಿಂಗಳಿಂದ ಧಾರವಾಡ, ಮಂಗಳೂರು, ಬೆಂಗಳೂರಿನಲ್ಲಿ ಪ್ರತಿದಿನವೂ ಮಧ್ಯಾಹ್ನದ ವೇಳೆ 100 ಜನರಿಗೆ ಊಟ ಒದಗಿಸುತ್ತಿದೆ. ಈ ಮೂರು ನಗರಗಳಲ್ಲಿ ಪ್ರತಿದಿನವೂ ಒಂದೊಂದು ಪ್ರದೇಶ ಗುರುತಿಸಿ, ವಾಹನದ ಮೂಲಕ ಆಹಾರ ಕೊಂಡೊಯ್ದು ನೀಡುವ ಮೂಲಕ, ಬಡವರು, ರೋಗಿಗಳು ಹಾಗೂ ವಿದ್ಯಾರ್ಥಿಗಳ ಪಾಲಿನ ‘ಅಕ್ಷಯ ಪಾತ್ರೆ’ಯಾಗಿದೆ.
‘ರಾಜ್ಯದಲ್ಲಿ ಕೆಲವೆಡೆ ಹೊಟ್ಟೆ ತುಂಬಾ ಊಟ ಸಿಗದೆ ಜನ ಪರದಾಡುತ್ತಾರೆ. ಅಂಥವರ ನೆರವಿಗಾಗಿ ಗ್ರಾಮ ವಿಕಾಸ ಸಂಸ್ಥೆಯಿಂದ ಕಳೆದ 10 ತಿಂಗಳಿಂದ ಪ್ರತಿದಿನ ಮಧ್ಯಾಹ್ನ ನಿರಂತರವಾಗಿ ಒಂದು ಹೊತ್ತು ಊಟ ನೀಡುವ ಕಾರ್ಯ ಮಾಡಲಾಗುತ್ತಿದೆ. ಹಸಿವಿನಿಂದ ಯಾರೊಬ್ಬರೂ ಬಳಲಬಾರದು’ ಎಂಬುದಷ್ಟೇ ನಮ್ಮ ಉದ್ದೇಶ’ ಎನ್ನುತ್ತಾರೆ ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ ಜಗದೀಶ ಶೇಖರ್ ನಾಯ್ಕ.
‘ಧಾರವಾಡದಲ್ಲಿನ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಎಪಿಎಂಸಿ ಮಾರುಕಟ್ಟೆ, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜು, ಕೋಚಿಂಗ್ ಕ್ಲಾಸ್, ಗ್ರಂಥಾಲಯ ಸೇರಿದಂತೆ ನಗರದ 15 ರಿಂದ 20 ಪ್ರದೇಶಗಳನ್ನು ಗುರುತಿಸಲಾಗಿದೆ. ಪ್ರತಿದಿನವೂ ಒಂದೊಂದು ಜಾಗಕ್ಕೆ ವಾಹನದ ಮೂಲಕ 100 ಊಟ ಕೊಂಡೊಯ್ದು ವಿತರಿಸಲಾಗುತ್ತಿದೆ. ಪಲಾವ್, ಅನ್ನ–ಸಾಂಬಾರು, ರೈಸ್ ಬಾತ್, ಬಿಸಿಬೇಳೆ ಬಾತ್, ವಾಂಗಿ ಬಾತ್, ಉಪ್ಪಿಟ್ಟು, ಹೀಗೆ ಪ್ರತಿದಿನವೂ ಒಂದೊಂದು ಥರದ ಆಹಾರ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.
9 ಜನರ ತಂಡವಿದ್ದು, ಊಟ ತಯಾರಿಸಿ, ನಿಯೋಜಿತ ಜಾಗಕ್ಕೆ ವಾಹನದ ಮೂಲಕ ಆಹಾರ ಒಯ್ದು ವಿತರಿಸಲಾಗುತ್ತಿದೆ. ಸದ್ಯ ಮಂಗಳೂರಿನಲ್ಲಿ ಹೊಸದಾಗಿ ಅಡುಗೆ ಮನೆ ನಿರ್ಮಾಣ ಕೆಲಸ ನಡೆಯುತ್ತಿದ್ದು, 15 ದಿನದೊಳಗೆ ಮುಗಿಯಲಿದೆ. ಅಲ್ಲಿನ ವಾಹನವನ್ನೂ ಧಾರವಾಡಕ್ಕೆ ತರಲಾಗಿದ್ದು, ಎರಡು ವಾಹನಗಳ ಮೂಲಕ ಬೇರೆ ಬೇರೆ ಸ್ಥಳಗಳಲ್ಲಿ ನಿತ್ಯ 200 ಜನರಿಗೆ ಊಟ ಒದಗಿಸಲಾಗುತ್ತಿದೆ.
‘ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಕೊಂಡು ಬಂದಿದ್ದೆ. ಕೈಲಿದ್ದ ಹಣವೆಲ್ಲವೂ ಆಸ್ಪತ್ರೆ, ಮಾತ್ರೆಗೇ ಖರ್ಚಾಯಿತು. ಊಟಕ್ಕೆ ಹಣ ಇರಲಿಲ್ಲ. ಹಸಿದ ಹೊಟ್ಟೆಯಲ್ಲೇ ಊರಿಗೆ ತೆರಳಲು ಮಗಳೊಂದಿಗೆ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬಸ್ ನಿಲ್ದಾಣದ ಬಳಿ ಗ್ರಾಮ ವಿಕಾಸ ಸಂಸ್ಥೆಯವರು ಉಚಿತವಾಗಿ ಊಟ ನೀಡಿದರು’ ಎಂದು ಹಾರೋಬೆಳವಾಡಿಯ ನಿಂಗವ್ವ ತಳವಾರ ಹೇಳಿದರು.
‘ಉನ್ನತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗಾಗಿ ಬಾಗಲಕೋಟೆಯಿಂದ ಧಾರವಾಡಕ್ಕೆ ಬಂದಿದೀನಿ. ಮನೆಯಿಂದ ಕೊಡುವ ಹಣ ತಿಂಗಳಪೂರ್ತಿ ಸಾಕಾಗದ ಕಾರಣ ಕೆಲವು ಬಾರಿ ಮಧ್ಯಾಹ್ನದ ವೇಳೆ ಊಟ ಮಾಡಲ್ಲ. ನನ್ನಂತೆಯೇ ಬಹುತೇಕರ ಪರಿಸ್ಥಿತಿಯೂ ಇದೆ ರೀತಿ ಇದೆ. ಇಂಥಹ ಸಂದರ್ಭದಲ್ಲಿ ಗ್ರಾಮ ವಿಕಾಸ ಸಂಸ್ಥೆಯವರು ಕೊಡುವ ಉಚಿತ ಊಟವೇ ನಮಗೆ ಆಸರೆಯಾಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಯುವಕನೊಬ್ಬ ಹೇಳಿದರು.
ಇದು ಒಬ್ಬಿಬ್ಬರ ಮಾತಲ್ಲ. ಇಲ್ಲಿ ಊಟ ಮಾಡಿದ ಪ್ರತಿಯೊಬ್ಬರೂ ಕೃತಜ್ಞತಾ ಭಾವದೊಂದಿಗೆ ಸಂಸ್ಥೆಯ ಸೇವೆ ಮೆಚ್ಚುಗೆ ಸೂಚಿಸುತ್ತಾರೆ. ಹಸಿದವರ ಹೊಟ್ಟೆ ತುಂಬಿಸುವ ಇಂತವರ ಸಂಖ್ಯೆ ಇನ್ನೂ ಹೆಚ್ಚಲಿ ಎಂಬ ಆಶಾಭಾವ ವ್ಯಕ್ತಪಡಿಸುತ್ತಾರೆ.
ಯಾರೂ ಹಸಿವಿನಿಂದ ಕೊರಗಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ 10 ಕಡೆಗಳಲ್ಲಿ ಹಸಿದವರಿಗೆ ಉಚಿತವಾಗಿ ಊಟ ಕೊಡುವ ಯೋಜನೆ ಇದೆಜಗದೀಶ ಶೇಖರ್ ನಾಯ್ಕ ಗ್ರಾಮ ವಿಕಾಸ ಸಂಸ್ಥೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.