ಧಾರವಾಡ: ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಐದನೇ ಘಟಿಕೋತ್ಸವ ಜುಲೈ 22ರಂದು ನಡೆಯಲಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ಪ‍್ರೊ. ವೆಂಕಪಯ್ಯ ಆರ್ ದೇಸಾಯಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಐಐಟಿಯ ಕೇಂದ್ರೀಯ ಕಲಿಕಾ ಸಭಾಂಗಭಣದಲ್ಲಿ ಮಧ್ಯಾಹ್ನ 3.30ಕ್ಕೆ ಘಟೀಕೋತ್ಸವ ಸಮಾರಂಭ ಆರಂಭವಾಗಲಿದೆ. ಅಮೆರಿಕದ ಖಗೋಳ ಮತ್ತು ಗ್ರಹ ವಿಜ್ಞಾನ ಪ್ರಾಧ್ಯಾಪಕ ಶ್ರೀನಿವಾಸ ಕುಲಕರ್ಣಿ ಘಟಿಕೋತ್ಸವ ಭಾಷಣ ಮಾಡುವರು ಎಂದರು.
ಐಐಟಿಯಲ್ಲಿ ಬಯೋ ನೆಸ್ಟ್ ಇನಕ್ಯುಬೇಷನ್ ಕೇಂದ್ರ ಸ್ಥಾಪನೆಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಂಸದರ ಅನುದಾನದಲ್ಲಿ ₹ 5.3 ಕೋಟಿ ಹಾಗೂ ಬಯೋಟೆಕ್ನಾಲಜಿ ಇಂಡಸ್ಟ್ರಿ ರೀಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್‌ನಿಂದ (ಬೈರಾಕ್) ₹ 5 ಕೋಟಿ ಒಟ್ಟು ₹ 10.3 ಕೋಟಿ ಅನುದಾನ ದೊರತಿದೆ. ಧಾರವಾಡ ರೀಸರ್ಚ್ ಅಂಡ್ ಟೆಕ್ನಾಲಜಿ ಇನ್ಕ್ಯುಬೆಟರ್ ಫೌಂಡೇಷನ್ (ಡಿಎಚ್‌ಎಆರ್‌ಟಿಐ–ಧರ್ತಿ) ಈ ಕೇಂದ್ರ ಸ್ಥಾಪನೆ ಜವಾಬ್ದಾರಿ ನಿರ್ವಹಿಸಲಿದೆ. ಕರ್ನಾಟಕ ಕಾಂಕ್ರಿಟ್ ಸಂಸ್ಥೆಯಿಂದ ನಮ್ಮ ಐಐಟಿಗೆ ಬೆಸ್ಟ್ ಬಿಲ್ಡಿಂಗ್ ಪುರಸ್ಕಾರ ಲಭಿಸಿದೆ ಎಂದು ತಿಳಿಸಿದರು.
ಐಐಟಿಯ 470 ಎಕರೆ ಪ್ರದೇಶವನ್ನು ಪರಿಸರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. 2030ರೊಳಗೆ ಈ ಗುರಿ ಸಾಧಿಸುವಂತೆ ಆಡಳಿತ ಮಂಡಳಿ ತಿಳಿಸಿದೆ. ಪರಶುರಾಮ ಬಸವೇಶ್ವರ ಅಕ್ಷಯ ಕ್ಷೇತ್ರ’ ಎಂದು ನಾಮಕರಣ ಮಾಡಿ ಯೋಜನೆಗಳನ್ನು ರೂಪಿಸಿದ್ದೇವೆ ಎಂದರು.
ಡೀನ್ ನಾರಾಯಣ ಎಸ್.ಪುಣೆಕರ್ ಮಾತನಾಡಿ, ಘಟಿಕೋತ್ಸವದಲ್ಲಿ ಒಟ್ಟು 190 ವಿದ್ಯಾರ್ಥಿಗಳು ಪದವಿ ಪಡೆಯುವರು. ಈ ಪೈಕಿ ಬಿ.ಟೆಕ್ 154 ಹಾಗೂ ಸ್ನಾತಕೋತ್ತರ ಪದವಿ 36 ಮಂದಿ ಪಡೆಯುವರು ಎಂದರು.
‘ಈ ವರ್ಷದಿಂದ ಹೊಸದಾಗಿ ಎರಡು ಸ್ನಾತಕೋತ್ತರ ಪದವಿ ಕೋರ್ಸ್ (ಕಂಪ್ಯೂಟರ್ ಸೈನ್ಸ್ ಹಾಗೂ ಎಲೆಕ್ಟ್ರಿಕಲ್ ವಿಭಾಗ) ಈ ಕೋರ್ಸ್ ಆರಂಭಿಸಲಾಗಿದೆ. ಈ ವರ್ಷ ಬಿ.ಟೆಕ್ ಕೋರ್ಸ್‌ನ ಎಲ್ಲ ವಿಭಾಗಗಳ ಸೀಟುಗಳನ್ನು ಹೆಚ್ಚಿಸಲಾಗಿದೆ. ಈ ವರ್ಷ ಒಟ್ಟು ವಿದ್ಯಾರ್ಥಿಗಳು ಸಂಖ್ಯೆ 1500ಕ್ಕೆ ತಲುಪಲಿದೆ. ಎಲ್ಲ ತರಗತಿಗಳು ಈ ಕ್ಯಾಂಪಸ್‌ನ ಕಟ್ಟಡಗಳಲ್ಲಿ ನಡೆಯುತ್ತಿವೆ’ ಎಂದು ತಿಳಿಸಿದರು.
ಪ್ರೊ.ಎಂ.ಎಸ್.ಶಿವಪ್ರಸಾದ ಮಾತನಾಡಿ, ಶಾಲೆಗಳು ಮತ್ತು ಕಾಲೇಜುಗಳ ಜತೆ ಐಐಟಿ ಸಹಭಾಗಿತ್ವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲು ಅನುಕೂಲವಾಗಲಿದೆ ಎಂದರು.
ಪ್ರೊ. ರಾಮಜೀ ರೆಪಾಕಾ, ಕುಲಚಿವ ಸಂದೀಪ್ ಪರೀಕ್, ಅಮರನಾಥ ಹೆಗಡೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.