ADVERTISEMENT

ಧಾರವಾಡದ ಇಟ್ಟಿಗಟ್ಟಿಯಲ್ಲಿ ಎಲೆಕ್ಟ್ರಾನಿಕ್ ಘಟಕ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:03 IST
Last Updated 17 ಆಗಸ್ಟ್ 2025, 6:03 IST
<div class="paragraphs"><p>ಪ್ರಲ್ಹಾದ ಜೋಶಿ</p></div>

ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: ‘ಧಾರವಾಡದ ಇಟ್ಟಿಗಟ್ಟಿಯಲ್ಲಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌) ಸ್ಥಾಪನೆಗೆ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಇದು ಪೂರಕವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘391 ಎಕರೆಯಲ್ಲಿರುವ ಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್‌ನ 28 ಎಕರೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಯಾಗಲಿದೆ. ಇದೇ 26ರಿಂದ ಇಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡಲಿವೆ. ಇಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿದ್ಧವಿರುತ್ತವೆ’ ಎಂದರು.

ADVERTISEMENT

‘ಉತ್ತರ ಕರ್ನಾಟಕ ಭಾಗದಲ್ಲಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ಎಸ್‌ಇಜೆಡ್‌ ಸ್ಥಾಪಿಸಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ’ ಎಂದು ಹೇಳಿದರು. 

‘ದೇಶದಲ್ಲಿ ಹೊಸದಾಗಿ ನಾಲ್ಕು ಸೆಮಿ ಕಂಡಕ್ಟರ್ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ₹7 ಸಾವಿರ ಕೋಟಿ ಅನುದಾನ ನೀಡಿದೆ. ಈಗಾಗಲೇ ನೋಯ್ಡಾ, ಶ್ರೀಪೆರಂಬದೂರು, ಮುಂದ್ರಾದಲ್ಲಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯಗಳಿವೆ. ಧಾರವಾಡದ ಘಟಕ ಅದಕ್ಕೆ ನೂತನ ಸೇರ್ಪಡೆ’ ಎಂದರು

‘ಎಫ್‌ಎಂಸಿಜಿ ಕ್ಲಸ್ಟರ್‌ಗೆ ಜಾಗ ಹಂಚಿಕೆ ಮಾಡಲು ಎದುರಾಗಿರುವ ಸಮಸ್ಯೆ ನಿವಾರಿಸುವಂತೆ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಮಾಡಲಾಗಿದೆ. ಎಸ್‌ಇಜೆಡ್‌ನಲ್ಲಿ ಉದ್ದಿಮೆಗಳಿಗೆ ಸುಂಕ ರಹಿತ ಆಮದು, ದೇಶೀಯ ಸರಬರಾಜಿಗೆ ಶೂನ್ಯ ದರದ ಜಿಎಸ್‌ಟಿ, ಅಧಿಕೃತ ಕಾರ್ಯಾಚರಣೆಗೆ ರಫ್ತು, ಆಮದು ಪರವಾನಗಿ ವಿನಾಯಿತಿ ನೀಡಲಾಗುತ್ತದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಏರೋಸ್ಪೇಸ್‌ ಪಾರ್ಕ್‌ ಸ್ಥಾಪಿಸಬೇಕು’ ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ‘ಏರೋಸ್ಪೇಸ್ ಪಾರ್ಕ್‌ ಅನ್ನು ಬೆಂಗಳೂರು ಬಳಿ ಸ್ಥಾಪಿಸುವ ಕುರಿತು ತೀರ್ಮಾನವಾಗಿದೆ. ನಮ್ಮ ಉತ್ಪನ್ನಗಳಿಗೆ  ಜಾಗತಿಕವಾಗಿ ಎಷ್ಟು ಬೇಡಿಕೆ ಇದೆ ಎಂಬ ಆಧಾರದ ಮೇಲೆ ರಕ್ಷಣಾ ಇಲಾಖೆಯವರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಈಗಾಗಲೇ ಇಲ್ಲಿ ಎಸ್‌ಇಜೆಡ್‌ ನೀಡಿದ್ದಾರೆ. ಎಲ್ಲವನ್ನೂ ಒಂದೇ ಕಡೆ ನೀಡಲು ಸಾಧ್ಯವಿಲ್ಲ’ ಎಂದರು.

ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ: ಜೋಶಿ

 ‘ಹಿಂದೂಗಳ ಭಾವನೆ ಘಾಸಿಗೊಳಿಸಿ ಧರ್ಮಸ್ಥಳ ವಿಷಯದಲ್ಲಿ ಅವರ ನಂಬಿಕೆ ಕುಸಿಯುವಂತೆ ಮಾಡಲು ಷಡ್ಯಂತ್ರ ಮಾಡಲಾಗಿದೆ. ರಾಜ್ಯ ಸರ್ಕಾರದಲ್ಲಿರುವ ತೀವ್ರ ಎಡಪಂಥೀಯ ವಿಚಾರಧಾರೆ ಹೊಂದಿರುವವರು ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.  ‘ಅಸಹಜ ಸಾವುಗಳು ಎಲ್ಲ ನಗರಗಳಲ್ಲೂ ಆಗುತ್ತವೆ. ಅದೇ ರೀತಿ ಧರ್ಮಸ್ಥಳದಲ್ಲೂ ಆಗಿವೆ. ಮರಣೋತ್ತರ ಪರೀಕ್ಷೆ ಆದ ನಂತರ ಅವುಗಳನ್ನು ಹೂಳಲಾಗಿರುತ್ತದೆ. ಆದರೆ ಕೆಲ ಯೂಟ್ಯೂಬರ್‌ಗಳು ಅದನ್ನು ತೆಗೆದು ತೋರಿಸುತ್ತಿದ್ದಾರೆ. ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.