ADVERTISEMENT

ಧಾರವಾಡ | ಮಾವಿನ ಬೆಳೆಗೆ ಜಿಗಿ ರೋಗ ಬಾಧೆ

ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್‌ ಮಾವಿನ ತೋಟ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:03 IST
Last Updated 18 ಫೆಬ್ರುವರಿ 2026, 7:03 IST
<div class="paragraphs"><p>ಧಾರವಾಡದ ಕೋಟೂರ ಗ್ರಾಮದ ಮಾವಿನ ಮರಗಳಲ್ಲಿ ಜಿಗಿ ರೋಗದಿಂದ ಹೂಗಳು ಒಣಗಿವೆ</p></div>

ಧಾರವಾಡದ ಕೋಟೂರ ಗ್ರಾಮದ ಮಾವಿನ ಮರಗಳಲ್ಲಿ ಜಿಗಿ ರೋಗದಿಂದ ಹೂಗಳು ಒಣಗಿವೆ

   

ಧಾರವಾಡ: ಜಿಲ್ಲೆಯ ಪ್ರಮುಖ ಬೆಳೆಯಾದ ಮಾವು ಹೂಕಟ್ಟಿರುವ ಹಂತದಲ್ಲಿ ಜಿಗಿ (ಬೂದಿ) ರೋಗ ಕಂಡುಬಂದಿದೆ. ಇಳುವರಿ ಕುಂಠಿತವಾಗುವ ಆತಂಕ ಬೆಳೆಗಾರರಿಗೆ ಕಾಡುತ್ತಿದೆ. 

ಜಿಲ್ಲೆಯಲ್ಲಿ ಮಾವಿನ ತೋಟ 13 ಸಾವಿರ ಹೆಕ್ಟೇರ್‌ ಇದೆ. ಈ ಬಾರಿ ಮಾವಿನ ಮರಗಳು ಸಮೃದ್ಧವಾಗಿ ಹೂ ಬಿಟ್ಟಿವೆ. ಉತ್ತಮ ಫಸಲಿನ ನಿರೀಕ್ಷೆ ಇತ್ತು. ಆದರೆ, ಕೆಲವು ದಿನಗಳಿಂದ ಜಿಗಿ ರೋಗವು ಕಾಣಿಸಿಕೊಂಡಿದ್ದು, ಎಲೆ ಮೇಲೆ ಜಿಗುಟು ಜಿಗಿ, ಹೂವಿನ ಗೊಂಚಲಿನ ಬಳಿ ಬೂದಿ ಬಣ್ಣದ ಶಿಲಿಂಧ್ರ (ಫಂಗಸ್) ಆವರಿಸಿದೆ. ಹೂಗಳು ಕಾಯಿ ಕಟ್ಟದಂತೆ ಕಮರಿಸುತ್ತಿದೆ. ಹೂಗಳು ಕಾಯಿಕಟ್ಟದೇ ಒಣಗಿ ಉದುರುತ್ತಿವೆ. ರೋಗ ನಿಯಂತ್ರಣಕ್ಕೆ ಬೆಳೆಗಾರರು ಔಷಧ ಸಿಂಪಡಣೆ ಮಾಡಲು ಹರಸಾಹಸ ಪಡುವಂತಾಗಿದೆ.

ADVERTISEMENT

ಜಿಲ್ಲೆಯಲ್ಲಿ ಅಲ್ಫಾನ್ಸೊ, ಕೇಸರ್, ರಸಪುರಿ, ಬಾದಾಮ್‌, ಕಲ್ಮಿ, ನೀಲಂ, ಮಲ್ಲಿಕಾ, ಅರ್ಕಾ ಹಾಗೂ ಇತರ ತಳಿಗಳನ್ನು ಬೆಳೆಯಲಾಗುತ್ತದೆ. ಈಗ ಬಹುತೇಕ ಅಲ್ಫಾನ್ಸೊ ಮಾವು ಇದೆ. ದೇಶದ ವಿವಿಧ ಕಡೆ, ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಮಾವಿಗೆ ಬೂದಿ ರೋಗ ಕಂಡುಬಂದಿರುವುದು ಬೆಳೆಗಾರರಿಗೆ ಸಮಸ್ಯೆಯಾಗಿದೆ. 

‘ಡಿಸೆಂಬರ್ ಆರಂಭದಲ್ಲಿಯೇ ಮಾವಿನ ತೋಟಗಳಲ್ಲಿ ಹೂವಿನ ಗೊಂಚಲು ಕಂಗೊಳಿಸಿದ್ದವು. ಆದರೆ, ಜನವರಿಯಲ್ಲಿ ಮೋಡ ಕವಿದ ವಾತಾವರಣ, ಚಳಿಯ ನಡುವೆ ಸುರಿದ ಮಂಜು ಹೂವು ಒಣಗಲು ಕಾರಣವಾಯಿತು. ಅಲ್ಲೊಂದು ಇಲ್ಲೊಂದು ಮರದಲ್ಲಿ ಒಂದೆರಡು ಮಾವಿನ ಕಾಯಿಗಳು ಕಾಣುತ್ತಿವೆ. ಅದರಲ್ಲೂ ಆಲ್ಫಾನ್ಸೊ ತಳಿ ಮಾವಿನ ಬೆಳೆಯು ಪೂರ್ಣ ಕೈಕೊಟ್ಟಿದೆ. ಎಕರೆಗೆ ಮೂರು ಕ್ವಿಂಟಲ್‌ ಸಿಗದ ಸ್ಥಿತಿ ಇದೆ’ ಎಂದು ಬೆಳೆಗಾರ ಪ್ರಮೋದ ಗಾಂವಕರ್ ಅವರು ಬೇಸರ ವ್ಯಕ್ತಪಡಿಸಿದರು.  

‘ಎರಡು ಎಕರೆಯಲ್ಲಿ ಮಾವು ಇದೆ. 80ಕ್ಕೂ ಹೆಚ್ಚು ಮರಗಳು ಇವೆ. ಈ ವರ್ಷ ಹೂವು ಚೆನ್ನಾಗಿ ಕಟ್ಟಿದ್ದವು. ಮೋಡ ಕವಿದ ವಾತಾವರಣದಿಂದಾಗಿ ಬೂದಿ ರೋಗ ಆವರಿಸಿದ್ದು, 30 ಸಾವಿರ ವೆಚ್ಚದಲ್ಲಿ ನಾಲ್ಕು ಬಾರಿ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬಂದಿಲ್ಲ’ ಎಂದು ತೇಗೂರಿನ ರೈತ ನಾಗಪ್ಪ ಉಂಡಿ ತಿಳಿಸಿದರು.

‘ಶೀಲಿಂಧ್ರ ನಾಶಕ ಔಷಧ ಸಿಂಪಡಿಸಿ’

‘ಮ್ಯಾಂಗೋ ಹಾಪರ್ಸ್’ ಶೀಲಿಂಧ್ರದಿಂದ ಜಿಗಿ ರೋಗ ಭಾದಿಸುತ್ತದೆ. ಹೂ ಹಾಗೂ ಕಾಯಿ ಹಂತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ರೋಗದ ತೀವ್ರತೆ ರಾತ್ರಿಯಲ್ಲಿ ಕಡಿಮೆ ತಾಪಮಾನ ಹಾಗೂ ಹಗಲಿನಲ್ಲಿ ಹೆಚ್ಚು ತಾಪಮಾನವಿರುವಂತಹ ಚಳಿಗಾಲದ ವಾತಾವರಣದಲ್ಲಿ ಹೆಚ್ಚುತ್ತದೆ. ರೈತರು ಶೀಲಿಂಧ್ರ ನಾಶಕ ಔಷಧ ಸಿಂಪಡಿಸಬೇಕು. ಮರಗಳಿಗೆ ಅಲ್ಲಲ್ಲಿ ಹಳದಿ ಅಂಟುಪಟ್ಟಿ ಹಚ್ಚಬೇಕು’ ಎಂದು ಕೃಷಿ ವಿ.ವಿ ತೋಟಗಾರಿಕೆ ವಿಭಾಗದ ಪ್ರೊ.ಎಸ್.ಎಂ. ಹಿರೇಮಠ ತಿಳಿಸಿದರು.

ರೋಗ ನಿಯಂತ್ರಣಕ್ಕೆ ಲ್ಯಾಮಡಾ ಸೆಹೆಲೋಥ್ರೀನ್ 5 ಇಸಿ 0.6 ಮಿ.ಲೀ +ಕಾರ್ಬನ್‌ಡೈಜಿಂ ಶೇ 12 + ಮ್ಯಾಂಕೋಜೆಬ್ ಶೇ 63 ಅಥವಾ ಟಾಲ್ ಫೆನ್‍ಪೈರಾಡ್ ಇಸಿ 1 ಮಿ.ಲೀ ಕಾರ್ಬನ್‍ಡೈಜಿಂಶೇ 12 + ಮ್ಯಾಂಕೋಜಬ್ ಶೇ 63 ಮತ್ತು 2 ಗ್ರಾಂ. ಔಷಧಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 

ಮಾವಿನ ಬೆಳೆಯಲ್ಲಿ ಜಿಗಿ ರೋಗ ಆವರಿಸಿ ಹೂವು ಮಿಡಿಕಾಯಿ ಉದುರುತ್ತಿವೆ. 15 ದಿನಗಳಿಗೊಮ್ಮೆ ಔಷಧ ಸಿಂಪಡಣೆ ಮಾಡಿದರೂ ಕಡಿಮೆಯಾಗುತ್ತಿಲ್ಲ. ಪದೇ ಪದೇ ಔಷಧ ಸಿಂಪಡಣೆಯಿಂದ ಬೆಳೆಗಾರರಿಗೆ ಆರ್ಥಿಕ ಹೊರೆಯಾಗುತ್ತಿದೆ
ಸುಭಾಷ ಅಕಳವಾಡಿ, ಅಧ್ಯಕ್ಷ, ಮಾವು ಬೆಳಗಾರರ ಬಳಗ
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಧಾರವಾಡ ಮತ್ತು ಕಲಘಟಗಿ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಸಮೀಕ್ಷೆ ನಡೆಸಿದೆ. ತಂಡವು ಶೀಘ್ರದಲ್ಲಿ ವರದಿ ನೀಡಲಿದೆ. ರೋಗ ಹತೋಟಿಗೆ ಕ್ರಮ ವಹಿಸಲಾಗುವುದು.
ಕಾಶಿನಾಥ ಭದ್ರಣ್ಣವರ, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.