ಪ್ರೊ.ರಮಾಕಾಂತ ಜೋಶಿ
ಧಾರವಾಡ: ಧಾರವಾಡ ಮನೋಹರ ಗ್ರಂಥಮಾಲಾ ಸಂಪಾದಕ, ಪ್ರಕಾಶಕ, ಲೇಖಕ, ನಿವೃತ್ತ ಪ್ರೊ.ರಮಾಕಾಂತ ಜಿ. ಜೋಶಿ (89) ಅವರು ಹುಬ್ಬಳ್ಳಿಯ ಶುಚಿರಾಯಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ರಮಾಕಾಂತ ಅವರು ನಗರದ ಕರ್ನಾಟಕ ವಿದ್ಯಾಲಯದಲ್ಲಿ ಬಿ.ಎ, ಗುಜರಾತಿನ ಸರ್ದಾರ್ ಪಟೇಲ್ ವಿ.ವಿ.ಯಲ್ಲಿ ಎಂ.ಎ ಮತ್ತು ಪಿಎಚ್. ಡಿ ಪಡೆದಿದ್ದರು. ನಗರದ ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, 1994ರಲ್ಲಿ ನಿವೃತ್ತರಾಗಿದ್ದರು.
ಅಪ್ಪ ಜಿ.ಬಿ.ಜೋಶಿ ಅವರು 1993 ರಲ್ಲಿ ನಿಧನರಾದ ನಂತರ ಮನೋಹರ ಗ್ರಂಥಮಾಲಾ ಜವಾಬ್ದಾರಿ ವಹಿಸಿಕೊಂಡಿದ್ದರು. ಗ್ರಂಥಮಾಲಾದಲ್ಲಿ ಬಹಳಷ್ಟು ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿದ್ದರು.
ದೀನಾನಾಥ ಮಲ್ಹೋತ್ರಾ ಅವರ ‘ಬುಕ್ ಪಬ್ಲಿಷಿಂಗ್’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ‘ಎ.ಕೆ.ರಾಮಾನುಜನ್ ಸಮಗ್ರ ಸಂಪುಟ’, ‘ರಾಘವೇಂದ್ರ ಖಾಸನೀಸ ಸಮಗ್ರ’, ‘ಒಂದಿಷ್ಟು ಹೊಸ ಕತೆಗಳು’ ‘ಸವಣೂರ ವಾಮನರಾವ ಸಮಗ್ರ ನಾಟಕ’, ‘ಮಿತ್ ಇನ್ ಇಂಡಿಯನ್ ಡ್ರಾಮಾ’ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ 'ವಿಶಿಷ್ಟ ಪ್ರಕಾಶಕ ಪ್ರಶಸ್ತಿ', ಕನ್ನಡ ಪುಸ್ತಕ ಪ್ರಾಧಿಕಾರದ ‘ಅತ್ಯುತ್ತಮ ಪ್ರಕಾಶನ‘ ಪ್ರಶಸ್ತಿ, 'ಆಳ್ವಾ ನುಡಿಸಿರಿ' ಪ್ರಶಸ್ತಿ ಸಹಿತ ಹಲವು ಪುರಸ್ಕಾರಕಗಳು ಸಂದಿವೆ.
ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯವರು ಇದ್ದಾರೆ. ನಗರದ ಮಂಗಳವಾರ ಪೇಟೆಯ ಮೆಣಸಿನಕಾಯಿ ಓಣಿಯ ಅವರ ಸ್ವಗೃಹದಲ್ಲಿ ಮೇ 18ರಂದು ಬೆಳಿಗ್ಗೆ 9 ರಿಂದ 10 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.