ಧಾರವಾಡ: ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಎರಡು ದಿನಗಳಲ್ಲಿ 47 ಮನೆಗಳು ಭಾಗಶಃ ಹಾನಿಯಾಗಿವೆ. ತಾಲ್ಲೂಕುವಾರು ಧಾರವಾಡ 25, ಹುಬ್ಬಳ್ಳಿ ನಗರ 10, ಕಲಘಟಗಿ 7, ಹುಬ್ಬಳ್ಳಿ 3 ಹಾಗೂ ಕುಂದಗೋಳ ಎರಡು ಮನೆ ಹಾನಿಯಾಗಿವೆ. ಗಾಳಿ ರಭಸಕ್ಕೆ ಕೆಲವೆಡೆ ಮರಗಳ ಟೊಂಗೆಗಳು ಮುರಿದಿವೆ.
ಮಂಗಳವಾರ ಇಡೀ ದಿನ ಜಿಟಿಜಿಟಿ ಮಳೆ ಸುರಿಯಿತು. ಹಳ್ಳಗಳು ಮೈದುಂಬಿಕೊಂಡು ಹರಿಯುತ್ತಿವೆ. ಕೆರೆ, ಕಟ್ಟೆಗಳಿಗೆ ನೀರಿನ ಸಂಗ್ರಹ ಹೆಚ್ಚಾಗಿದೆ. ನಿರಂತರ ಮಳೆಯಿಂದಾಗಿ ಕೆಲವೆಡೆ ಜಮೀನುಗಳಲ್ಲಿ ನೀರು ನಿಂತಿದೆ.
ನಗರ ಸಹಿತ ಸುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಕೆಸರುಮಯ ರಸ್ತೆಗಳಲ್ಲಿ ಸಂಚಾರ ಪಡಿಪಾಟಲಾಗಿದೆ. ಕಲಘಟಗಿ ಮತ್ತು ಅಳ್ನಾವರ ತಲಾ 3.6, ಧಾರವಾಡ 1.6, ಹುಬ್ಬಳ್ಳಿ 1.3 ಹಾಗೂ ಕುಂದಗೋಳ 1.2 ಸೆಂ.ಮೀ ಮಳೆಯಾಗಿದೆ.
ಶಾಲೆ ಕಾಲೇಜಿಗೆ ರಜೆ ಇಂದು
ಧಾರವಾಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆ.20 ರಂದು ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.