ADVERTISEMENT

ಧಾರವಾಡ| ರಮೇಶ ಕತ್ತಿ ಬಂಧನಕ್ಕೆ ಆಗ್ರಹ: ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:19 IST
Last Updated 28 ಅಕ್ಟೋಬರ್ 2025, 5:19 IST
ರಮೇಶ್ ಕತ್ತಿ ಹೇಳಿಕೆ ಖಂಡಿಸಿ ಧಾರವಾಡದಲ್ಲಿ ವಾಲ್ಮೀಕಿ ಸಮುದಾಯದವರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ರಮೇಶ್ ಕತ್ತಿ ಹೇಳಿಕೆ ಖಂಡಿಸಿ ಧಾರವಾಡದಲ್ಲಿ ವಾಲ್ಮೀಕಿ ಸಮುದಾಯದವರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಧಾರವಾಡ: ಬೆಳಗಾವಿಯ ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಘಟಕದವರು ಸೋಮವಾರ ಪ್ರತಿಭಟನೆ ನಡೆಸಿದರು.

ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಕಾರರು ಅಣುಕು ಶವಯಾತ್ರೆಯ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಕತ್ತಿ ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಪಟಾಕಿ ಸಿಡಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ರಮೇಶ ಕತ್ತಿ ಅವರು ವಾಲ್ಮೀಕಿ ಸಮಾಜವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

‘ರಮೇಶ್ ಕತ್ತಿ ಅವರು ನಿಂದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಾಲ್ಮೀಕಿ ಸಮುದಾಯದವರ ಭಾವನೆಗಳಿಗೆ ಧಕ್ಕೆ ತಂದಿದೆ. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ವಾಲ್ಮೀಕಿ ಸಮುದಾಯವನ್ನು ನಿಂದಿಸುವ ಮೂಲಕ ರಮೇಶ್ ಕತ್ತಿ ದೊಡ್ಡ ತಪ್ಪು ಮಾಡಿದ್ದಾರೆ. ಸಮುದಾಯವನ್ನು ಕೆಣಕುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡಿದ್ದಾರೆ‘ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಕಲ್ಮೇಶ ಹಾವೇರಿಪೇಟ್, ಎಂ.ಅರವಿಂದ, ಚಂದ್ರಶೇಖರ ಜುಟ್ಟಲ, ಮೋಹನ ಗುಡಸಲಮನಿ, ಕಲ್ಲಪ್ಪ ವಾಲಿಕಾರ, ಪುಂಡಲೀಕ ತಳವಾರ, ಶಿವಕುಮಾರ, ರಾಜು ಕುಂದಗೋಳ, ಆತ್ಮಾನಂದ ತಳವಾರ ಪಾಲ್ಗೊಂಡಿದ್ದರು.

ರಮೇಶ ಕತ್ತಿ ಅವರ ಹೇಳಿಕೆಯಿಂದ ವಾಲ್ಮೀಕಿ ಸಮಾಜಕ್ಕೆ ನೋವಾಗಿದೆ. ತಕ್ಷಣವೇ ಅವರನ್ನು ಬಂಧಿಸಬೇಕು. ಕ್ರಮವಹಿಸದಿದ್ದರೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು
ಮೋಹನ ಗುಡಸಲಮನಿ ಜಿಲ್ಲಾ ಘಟಕದ ಅಧ್ಯಕ್ಷ ವಾಲ್ಮೀಕಿ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.