
ಧಾರವಾಡ: ‘ಕೌಶಲ ಕಲಿಯುವುದು ಇಂದಿನ ಅಗತ್ಯವಾಗಿದೆ. ಕೌಶಲಾಧಾರಿತ ಶಿಕ್ಷಣ ನೀಡಬೇಕು, ಆ ನಿಟ್ಟಿನಲ್ಲಿ ಪಠ್ಯಕ್ರಮವನ್ನು ನವೀಕೃತಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ. ಎಸ್.ಆರ್.ನಿರಂಜನ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಗಣಕವಿಜ್ಞಾನ ಅಧ್ಯಯನ ವಿಭಾಗ, ಕಾರ್ಡಿಫ್ ಮೆಟ್ರೊಪಾಲಿಟನ್, ಕೆನರಾ ಎಂಜಿನಿಯರಿಂಗ್ ಕಾಲೇಜು, ಕೆಎಲ್‌ಇ ಟೆಕ್ ಸಂಸ್ಥೆ, ಮಂಗಳೂರು ವಿಶ್ವವಿದ್ಯಾಲಯ, ವೇಲ್ಸ್ ಯುನಿವರ್ಸಿಟಿ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಪಿ.ಎಂ.ಉಷಾ ಯೋಜನೆ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ‘ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವರ್ಕರ್ ಮೆಟಿ ಇಂಡಿಯಾ ಗ್ರಾಜ್ಯುಯೇಟ್ಸ್ ಇಂಡಿಯಾ 2024ರ ವರದಿ ಪ್ರಕಾರ, ಭಾರತದಲ್ಲಿ ಶೇ 42.6 ಪದವೀಧರರು ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ಪ್ರಾಯೋಗಿಕ ಜ್ಞಾನದ ಕೊರತೆ, ದುರ್ಬಲ ಸಂವಹನ, ಹಳೆಯ ಪಠ್ಯಕ್ರಮ ಮೊದಲಾದವು ಉನ್ನತ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ಉದ್ಯೋಗದಾತರು ಅಭ್ಯರ್ಥಿಯ ಕೌಶಲ, ಅನ್ವೇಷಣೆ, ಬುದ್ಧಿವಂತಿಕೆ ಸೂಚ್ಯಂಕ ಎಲ್ಲವನ್ನು ಪರಿಶೀಲಿಸುತ್ತಾರೆ’ ಎಂದರು.
‘ರಾಜ್ಯ ಶಿಕ್ಷಣ ನೀತಿಯಡಿ (ಎಸ್‌ಇಪಿ) ಪಠ್ಯಕ್ರಮ ರಚನೆಗೆ ಅಧ್ಯಯನ ಮಂಡಳಿಗೆ (ಬಿಒಎಸ್) ಪೂರ್ಣ ಸ್ವಾಯತ್ತೆ ನೀಡಲಾಗಿದೆ. ಕೌಶಲಗಳನ್ನು ಅಳವಡಿಸಿ ಪಠ್ಯಕ್ರಮ ವಿಸ್ತರಣೆಗೂ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷ ಪ್ರೊ.ಸುಖದೇವ ಥೊರಟ್ ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ತಿಳಿಸಿದರು.
‘ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ವಿದ್ಯಾರ್ಥಿಗಳನ್ನು ತಯಾರಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ಅಂತರ್‌ಶಿಸ್ತೀಯ ಮತ್ತು ಬಹಶಿಸ್ತೀಯ ಜ್ಞಾನ ನೀಡಬೇಕು. ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್, ಗಣಕವಿಜ್ಞಾನ ಮೊದಲಾದವನ್ನು ತಿಳಿದುಕೊಳ್ಳಬೇಕು. ಉದ್ಯಮಗಳು ಬೇಡುವ ಕೌಶಲಗಳನ್ನು ಕಲಿಯಬೇಕು’ ಎಂದು ವಿವರಿಸಿದರು.
‘ವಿದೇಶಿ ವಿಶ್ವವಿದ್ಯಾಲಯಗಳು ದೇಶಕ್ಕೆ ಕಾಲಿಟ್ಟಿವೆ. ಸ್ಥಳೀಯ ವಿಶ್ವವಿದ್ಯಾಲಯಗಳು ಪರಸ್ಪರ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಬೇಕು. ಜ್ಞಾನ ವಿನಿಮಯ ಮಾಡಿಕೊಳ್ಳಬೇಕು. ನವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.
‘ಕೃತಕ ಬುದ್ಧಿಮತ್ತೆಯು ಉದ್ಯೋಗಗಳನ್ನು ಕಸಿಯಲಿದೆ ಎಂಬ ಭಾವನೆ ಸರಿಯಲ್ಲ. ಕಂಪ್ಯೂಟರ್ ಬಂದಾಗಲೂ ಇದೇ ಭಾವನೆ ಇತ್ತು. ಆದರೆ, ಹಾಗೆ ಆಗಲಿಲ್ಲ. ಕೌಶಲ ಕಲಿತಿದಿದ್ದರೆ ಉದ್ಯೋಗಕ್ಕೆ ಸಮಸ್ಯೆಯಾಗಲ್ಲ’ ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ.ಖಾನ್ ಅಧ್ಯಕ್ಷತೆ ವಹಿಸಿದ್ದರು. ಐಐಐಟಿ ನಿರ್ದೇಶಕ ಪ್ರೊ. ಮಹದೇವ ಪ್ರಸನ್ನ, ಪ್ರೊ. ಶ್ರೀದೇವಿ, ಪ್ರೊ. ಎಸ್.ಶಿವಶಂಕರ್, ಪ್ರೊ. ಅಂಗೇಶ್ ಅನುಪಮ್, ವಿಜಯಕುಮಾರ ಗುರಾವಿ ಇದ್ದರು.
ಕೃತಕ ಬುದ್ಧಿಮತ್ತೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಕ್ರಿಯಾಶೀಲತೆ ಕುಂದಬಾರದು. ತಂತ್ರಜ್ಞಾನ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಇಂಥ ವಿಚಾರ ಸಂಕಿರಣಗಳು ದಿಕ್ಸೂಚಿಯಾಗಿವೆ
- ಪ್ರೊ. ಬಿ.ಡಿ.ಕುಂಬಾರ ಕುಲಪತಿ ದಾವಣಗೆರೆ ವಿ.ವಿ
ವಿಶ್ವವಿದ್ಯಾಲಯಗಳು ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಕಾರ್ಯಕ್ರಮ ಯೋಜನೆಗಳಲ್ಲಿ ಜೊತೆಗೂಡಿ ಕಾರ್ಯ ನಿರ್ವಹಿಸಬೇಕು. ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು
-ಪ್ರೊ. ಪಿ.ಎಲ್.ಧರ್ಮ ಕುಲಪತಿ ಮಂಗಳೂರು ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.