ADVERTISEMENT

ಸಂದರ್ಶನ | ಸಾಹಿತ್ಯದ ಪ್ರೀತಿ ಬಿತ್ತುವ ಕಾಯಕ: ನಿತಿನ್‌ಚಂದ್ರ ಹತ್ತೀಕಾಳ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮನದಾಳ

ಬಿ.ಜೆ.ಧನ್ಯಪ್ರಸಾದ್
Published 25 ಮಾರ್ಚ್ 2025, 5:09 IST
Last Updated 25 ಮಾರ್ಚ್ 2025, 5:09 IST
<div class="paragraphs"><p>ಡಾ.ನಿತಿನ್‌ಚಂದ್ರ ಹತ್ತೀಕಾಳ</p></div>

ಡಾ.ನಿತಿನ್‌ಚಂದ್ರ ಹತ್ತೀಕಾಳ

   
ಧಾರವಾಡ: ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ನಿತಿನ್‌ಚಂದ್ರ ಹತ್ತೀಕಾಳ ಅವರು ಕಾಮಾಲೆ ರೋಗದ ಚಿಕಿತ್ಸೆಗೆ ಹೆಸರುವಾಸಿಯಾದವರು. ಸಾಹಿತ್ಯ ಕೃಷಿಯಲ್ಲೂ ತೊಡಗಿದ್ದಾರೆ. ಮಕ್ಕಳಲ್ಲಿ, ಜನರಲ್ಲಿ ಸಾಹಿತ್ಯ ಓದು–ಬರಹದ ಕುರಿತು ಪ್ರೀತಿ, ಗಾಂಧಿ ವಿಚಾರಧಾರೆ ಬಿತ್ತುವ ಕಾಯಕ ಮಾಡುತ್ತಿದ್ದಾರೆ. ಸಾಹಿತ್ಯ ಕುರಿತ‌ ತಮ್ಮ ವಿಚಾರಗಳನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಸಾಹಿತ್ಯದಲ್ಲಿ ಆಸಕ್ತಿ ಮೊಳೆತಿದ್ದು ಹೇಗೆ?

ನಮ್ಮ ಅಪ್ಪ ಬಹಳಷ್ಟು ಪುಸ್ತಕಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಪುಸ್ತಕಗಳನ್ನು ಓದುವ ಹವ್ಯಾಸ ಬಾಲ್ಯದಲ್ಲೇ ಮೈಗೂಡಿತು. ಶಾಲಾ ಹಂತದಲ್ಲೇ ಸಾಹಿತ್ಯದ ಒಲವು ಬೆಳೆಯಿತು. ಸ್ವಾಮಿ ಜಗದಾತ್ಮನಂದ ಅವರ ‘ಬದುಕಲು ಕಲಿಯಿರಿ’ ಪುಸ್ತಕ, ರಾಜಕುಮಾರ್‌ ಅಭಿನಯದ ‘ಮಾರ್ಗದರ್ಶಿ’ ಬದುಕಿನ ಮೇಲೆ ಪರಿಣಾಮ ಬೀರಿವೆ.

ADVERTISEMENT

ವೈದ್ಯ ವೃತ್ತಿ ಜತೆಗೆ ಸಾಹಿತ್ಯ ಕೃಷಿ ಪಯಣದ ಅನುಭವ ತಿಳಿಸಿ

ನನ್ನದು ವೈದ್ಯ ವೃತ್ತಿ. ಪ್ರವೃತ್ತಿ ಸಾಹಿತ್ಯ ಮತ್ತು ಅಧ್ಯಾತ್ಮ. 1980 ಆಗಸ್ಟ್‌ನಲ್ಲಿ ನಗರದ ಗೌಂಧಿ ಚೌಕದಲ್ಲಿ ದವಾಖಾನೆ ಆರಂಭಿಸಿ, ವೈದ್ಯ ವೃತ್ತಿ ಆರಂಭಿಸಿದೆ. ಬಹುತೇಕ ವೈದ್ಯರು ಇಂಗ್ಲಿಷ್‌ನಲ್ಲಿ ಔಷಧ ಚೀಟಿ ಬ‌ರೆಯುತ್ತಾರೆ. ನಾನು ಕನ್ನಡದಲ್ಲಿ ಬರೆಯುತ್ತೇನೆ, ಕನ್ನಡದ ಅಂಕಿಗಳನ್ನೇ ನಮೂದಿಸುತ್ತೇನೆ. ರೋಗಿಯ ಹೆಸರು, ಔಷಧ ಯಾವಾಗ ಸೇವಿಸಬೇಕು (ಮುಂಜಾನೆ, ಮಧ್ಯಾಹ್ನ, ಸಂಜೆ, ರಾತ್ರಿ, ಊಟಕ್ಕೆ ಮುನ್ನ ನಂತರ, ಊಟದ ನಂತರ... ಇತ್ಯಾದಿ) ಎಂಬ ವಿವರವನ್ನು ಕನ್ನಡದಲ್ಲೇ ಬರೆಯುತ್ತೇನೆ. ರೋಗಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೋಪನಕೊಪ್ಪದ ಸಿದ್ಧವೀರ ಸ್ವಾಮೀಜಿಯಿಂದ ಅಧ್ಯಾತ್ಮದ ಒಲವು ಬೆಳೆಯಿತು. 1981ರಲ್ಲಿ ಸಿದ್ಧವೀರ ಸತ್ಸಂಗ ರಚಿಸಿ ಬಹಳಷ್ಟು ಕಾರ್ಯಚಟುವಟಿಕೆಗಳನ್ನು ಮಾಡಿದ್ದೇವೆ.

ತಂತ್ರಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರದವರು, ಯುವಜನರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವುದು ಹೇಗೆ?

ವೈದ್ಯಕೀಯ, ಎಂಜಿನಿಯರಿಂಗ್‌ ಮೊದಲಾದ ಕ್ಷೇತ್ರದ ಬಹಳಷ್ಟು ಮಂದಿ ಸಾಹಿತ್ಯಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇರುತ್ತಾರೆ. ಯುವಜನರು ಮೊಬೈಲ್‌ಫೋನ್‌, ಸಾಮಾಜಿಕ ಮಾಧ್ಯಮಗಳ ಗುಂಗಿನಲ್ಲಿ ಮುಳುಗಿರುತ್ತಾರೆ. ಪುಸ್ತಕ ಸಂಗ್ರಹಿಸುವುದನ್ನು ಕಲಿಸಬೇಕು. ಕನ್ನಡ ಸಾರಸ್ವತ ಲೋಕದ ವಿವಿಧ ಸಾಹಿತಿಗಳ ಪುಸ್ತಕಗಳು ಮನೆಯಲ್ಲಿ ಇದ್ದರೆ ಓದುವ ಅಭಿರುಚಿ ಬೆಳೆಯುತ್ತದೆ. ಸಾಹಿತ್ಯ ಓದು ಸತ್ಪ್ರಜೆಗಳಾಗಿ ರೂಪುಗೊಳ್ಳಲು ನೆರವಾಗುತ್ತದೆ. ಸಾಹಿತ್ಯ ಓದಿನಿಂದ ಬದುಕಿಗೆ ಆಗುವ ಪ್ರಯೋಜನಗಳನ್ನು ಯುವಜನರಿಗೆ ತಿಳಿಸಬೇಕು.

ಗಾಂಧೀಜಿ ಜೀವನಾದರ್ಶಗಳನ್ನು ಮಕ್ಕಳಲ್ಲಿ ಬಿತ್ತುವ ಕಾಯಕದ ಕುರಿತು ತಿಳಿಸಿ

ಗಾಂಧೀಜಿಯಿಂದ ಪ್ರಭಾವಿತನಾಗಿದ್ದೇನೆ. ಅವರ ಜೀವನಾದರ್ಶಗಳನ್ನು ಮಕ್ಕಳು, ಯುವಜನರಲ್ಲಿ ಬಿತ್ತುವುದು ನನ್ನ ಮಹದಾಸೆ. ‘ಬಾಪೂ ಚಿಂತನ’ ‘ಗಾಂಧೀ ಸ್ಮೃತಿ’ ಕಿರು ಪುಸ್ತಕ ರಚಿಸಿ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದ್ದೇನೆ. ಮಧ್ಯಪಾನದ ನಿಷೇಧ, ಇತ್ಯಾದಿ ಕುರಿತು ಪುಸ್ತಕಗಳಲ್ಲಿ ಬರೆದಿದ್ದೇನೆ.

ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಪ್ರೀತಿ ಬೆಳೆಸುವ ಬಗೆ ಹೇಗೆ?

ಕನ್ನಡದ ಬಗ್ಗೆ ಅಲಕ್ಷ್ಯ ವಹಿಸಬಾರದು. ತಾಯಿಗೆ ತೋರುವ ದೈವಿ ಭಾವನೆಯನ್ನು ಕನ್ನಡಕ್ಕೂ ತೋರಬೇಕು. ತಪ್ಪಿಲ್ಲದೆ ಶುದ್ಧ ಕನ್ನಡ ಬರೆಯುವುದನ್ನು, ಓದುವುದನ್ನು ಮಕ್ಕಳಿಗೆ ಶಿಕ್ಷಕರು ಕಲಿಸಬೇಕು. ಪ್ರತಿ ತರಗತಿಯ ಪಠ್ಯದ‌ಲ್ಲಿ ಆರೋಗ್ಯದ ವಿಷಯಗಳನ್ನು ಅಳವಡಿಸಬೇಕು.

ಕಿರು ಪರಿಚಯ
ಡಾ.ನಿತಿನ್‌ಚಂದ್ರ ಹತ್ತೀಕಾಳ ಅವರು ಧಾರವಾಡ ತಾಲ್ಲೂಕಿನ ಮಾರಡಗಿ ಗ್ರಾಮದವರು. ಬಳ್ಳಾರಿಯ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್‌ ಓದಿದ್ದಾರೆ. ನಾಲ್ಕು ದಶಕಗಳಿಂದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಬಾಪೂ ಚಿಂತನ’ ‘ಗಾಂಧೀ ಸ್ಮೃತಿ’ ‘ಬಸವತತ್ವ ಚಿಂತನ’ ಹಾಗೂ ‘ಹದಿಮೂರು ಕವನಗಳು’ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ರಾಜ್ಯೋತ್ಸವ’ ‘ಬಸವಭೂಷಣ’ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.