ADVERTISEMENT

ಧಾರವಾಡ | 12 ನೇ ವಾರ್ಡ್‌: ಉದ್ಯಾನ ಅಭಿವೃದ್ಧಿ, ಸಿ.ಸಿ ರಸ್ತೆಗೆ ಆದ್ಯತೆ 

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:28 IST
Last Updated 23 ಜನವರಿ 2026, 8:28 IST
ಧಾರವಾಡದ ಫ್ರೆಂಡ್ಸ್‌ಕಾಲೊನಿಯ ಉದ್ಯಾನದಲ್ಲಿ ವ್ಯಾಯಾಮ ಉಪಕರಣ ಅಳವಡಿಸಲಾಗಿದೆ. 
ಧಾರವಾಡದ ಫ್ರೆಂಡ್ಸ್‌ಕಾಲೊನಿಯ ಉದ್ಯಾನದಲ್ಲಿ ವ್ಯಾಯಾಮ ಉಪಕರಣ ಅಳವಡಿಸಲಾಗಿದೆ.    

ಧಾರವಾಡ: ಉದ್ಯಾನ ಅಭಿವೃದ್ಧಿ, ಸಿ.ಸಿ.ರಸ್ತೆ ನಿರ್ಮಾಣ, ಡಾಂಬರೀಕರಣ, ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿಗಳು 12 ನೇ ವಾರ್ಡ್‍ನ ವಿವಿಧಡೆ ನಡೆದಿವೆ. ವಾರಕ್ಕೊಮ್ಮೆ ನೀರು ಪೂರೈಕೆ, ಚರಂಡಿಯಲ್ಲಿ ಹೂಳು, ಕಸ ಅಸಮರ್ಪಕ ವಿಲೇವಾರಿ, ಬೀದಿ ನಾಯಿಗಳ ಹಾವಳಿ, ಪೌರಕಾರ್ಮಿಕರ ಕೊರತೆ ಮೊದಲಾದ ಸಮಸ್ಯೆಗಳು ಇವೆ.

ಭಾರತಿ ನಗರ, ಸಾಯಿ ನಗರ, ಭಾವಿಕಟ್ಟಿ ಪ್ಲಾಟ್, ರೆವಿನ್ಯೂ ಕಾಲೊನಿ, ಮಕಡವಾಲೆ ಪ್ಲಾಟ್, ಸಪ್ತಾಪುರ ಸೇರಿದಂತೆ ಹಲವಡೆ ಸಿ.ಸಿ.ರಸ್ತೆಗಳನ್ನು ನಿರ್ಮಿಸಲಾಗಿದೆ. ವಾರ್ಡ್ ನಲ್ಲಿ 21 ಉದ್ಯಾನಗಳು ಇವೆ. 15 ಉದ್ಯಾನಗಳಲ್ಲಿ ವಿಹಾರ ಪಥ ನಿರ್ಮಿಸಿ, ಹೈಮಾಸ್ಟ್‌ ದೀಪ ಅಳವಡಿಸಿ ಅಭಿವೃದ್ಧಿಪಡಿಸಲಾಗಿದೆ.

ಫ್ರೆಂಡ್ಸ್‌ ಕಾಲೊನಿ ಉದ್ಯಾನದಲ್ಲಿ ಜಿಮ್, ವ್ಯಾಯಾಮ ಉಪಕರಣ, ಮಕ್ಕಳ ಆಟಿಕೆ ಪ‍ರಿಕರಗಳನ್ನು ಅಳವಡಿಸಿ ಅಭಿವೃದ್ಧಿಪಡಿಸಲಾಗಿದೆ. ಸಪ್ತಾಪುರ ಭಾಗದ ಕೆಲವಡೆ ನೀರು ನಿರಂತರ ಪೂರೈಕೆ ಯೋಜನೆ ಕಾರ್ಯಗತವಾಗಿದೆ.

ADVERTISEMENT

‘ ₹ 40 ಲಕ್ಷ ಅನುದಾನದಲ್ಲಿ ಫ್ರೆಂಡ್ಸ್‌ ಕಾಲೊನಿಯ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ₹ 20 ಲಕ್ಷ ಅನುದಾನದಲ್ಲಿ ಮಹಾಂತ ನಗರ, ಶ್ರೀಪಾದ ನಗರ, ರಾಣಿ ಚೆನ್ನಮ್ಮ ನಗರ ಉದ್ಯಾನದಲ್ಭಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ.  ₹ 15 ಲಕ್ಷ ಅನುದಾನದಲ್ಲಿ ತುಂಗಭದ್ರಾ ಕಾಲೊನಿಯಲ್ಲಿ ಯೋಗಾ ಭವನ ನಿರ್ಮಿಸಲಾಗಿದೆ. ಕೆಲವೆಡೆ ಒಳ ರಸ್ತೆಗಳ ನಿರ್ಮಿಸಬೇಕಿದೆ’ ಎಂದು ಪಾಲಿಕೆ ಸದಸ್ಯ ವಿಜಯಾನಂದ ಎಸ್.ಶೆಟ್ಟಿ ತಿಳಿಸಿದರು. 

ಮಹಾಂತ ನಗರ, ಕೃಷಿ ನಗರ ಸಹಿತ ಫ್ರೆಂಡ್ಸ್‌ ಕಾಲೊನಿ ಸಹಿತ ಹಲವು ರಸ್ತೆಗಳಲ್ಲಿ ಪೈಪ್‍ಲೈನ್ ಅಳವಡಿಕೆಗೆ ರಸ್ತೆ ಅಗೆದಿದ್ದು, ಗುಂಡಿಗಳಾಗಿವೆ. ಹಲವಡೆ ಚರಂಡಿ ಸಮಸ್ಯೆ ಇದೆ.ಗಟಾರಗಳಲ್ಲಿ ಕಸ, ಕಡ್ಡಿ, ಹೂಳು ತುಂಬಿಕೊಂಡಿದೆ. ಫ್ರೆಂಡ್ಸ್‌ ಕಾಲೊನಿ, ಸಿಲ್ವರ್‌ ಆರ್ಚ್‌, ಲೇಕ್ ಸಿಟಿ, ಮಹಾಂತ ನಗರದ ಒಳರಸ್ತೆಗಳು ಗುಂಡಿಗಳಾಗಿವೆ.

ಮಳೆ ಜೋರಾಗಿ ಸುರಿದಾಗ ಭಾವಿಕಟ್ಟಿ ಪ್ಲಾಟ್‍ನಲ್ಲಿ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಇದೆ.  ಕಾಲುವೆ ನಿರ್ಮಿಸಿ ನೀರು ನುಗ್ಗದಂತೆ ಕ್ರಮವಹಿಸಬೇಕು ಎಂದು ವಾರ್ಡ್ ನಿವಾಸಿಯೊಬ್ಬರು ಆಗ್ರಹಿಸಿದರು.

’ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಅನುದಾನ ಮಂಜೂರು’

ಶಾಸಕರ ₹ 5 ಕೋಟಿ ಅನುದಾನದಲ್ಲಿ ಸಾಯಿ ನಗರದ ಮುಖ್ಯ ರಸ್ತೆ ಮಕಡವಾಲೆ ಪ್ಲಾಟ್ ಸಿದ್ದರಾಮೇಶ್ವರ ನಗರ ಸಹಿತ ಹಲವಡೆ ಸಿ.ಸಿ.ರಸ್ತೆಗಳನ್ನು ನಿರ್ಮಿಸಲಾಗಿದೆ. ಪಾಲಿಕೆಯ ₹ 2.50 ಕೋಟಿ ಅನುದಾನದಲ್ಲಿ ವಿಜಯಾನಂದ ನಗರದಲ್ಲಿ ಸಿ.ಸಿ.ರಸ್ತೆ ನಿರ್ಮಿಸಲಾಗಿದೆ. ₹ 1 ಕೋಟಿ  ಅನುದಾನದಲ್ಲಿ ಶ್ರೀಪಾದ ನಗರ ಒಳರಸ್ತೆಗಳನ್ನು ನಿರ್ಮಿಸಲಾಗಿದೆ. ₹ 50 ಲಕ್ಷ ಅನುದಾನದಲ್ಲಿ ಭಾವಿಕಟ್ಟಿ ಪ್ಲಾಟ್ ರಸ್ತೆ ಮತ್ತು ಎಸ್.ಕೆ.ಎಸ್ ಕಾಲೊನಿ ರಸ್ತೆ ₹ 1 ಕೋಟಿ ಅನುದಾನದಲ್ತಿ ಮಹಾಂತ ನಗರದಲ್ಲಿ ರಸ್ತೆ ನಿರ್ಮಿಸಲಾಗಿದೆ. ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲು ₹ 15 ಲಕ್ಷ ಅನುದಾನ ಮಂಜೂರಾಗಿದೆ. 24X7 ನೀರು ಪೂರೈಕೆ ಯೋಜನೆಯ ಪೈಪ್ ಅಳವಡಿಕೆ ಕಾಮಗಾರಿ ಶೇ 75 ಮುಗಿದಿದೆ ಎಂದು 12 ನೇ ವಾರ್ಡ್ ಸದಸ್ಯ ವಿಜಯಾನಂದ ಎಸ್.ಶೆಟ್ಟಿ ತಿಳಿಸಿದರು.

ಏಳು ದಿನಗಳಿಗೊಮ್ಮೆ ನೀರು ಪೂರೈಸುತ್ತಾರೆ. ನಾಲ್ಕು ದಿನಗಳಿಗೊಮ್ಮೆ ಪೂರೈಸಿದರೆ ಅನುಕೂಲವಾಗುತ್ತದೆ. ಹದಗೆಟ್ಟಿರುವ ಗಟಾರಗಳನ್ನು ಸರಿಪಡಿಸಬೇಕು. ಕಸ ವಿಲೇವಾರಿ  ಸಮರ್ಪಕವಾಗಿ ಮಾಡಬೇಕು. ಬೀದಿ ದೀಪಗಳ ವ್ಯವಸ್ಥೆ ಚೆನ್ನಾಗಿದೆ
ರಾಮಚಂದ್ರ ಮಾಡಲಗೇರಿ ಎಸ್‌ಕೆಎಸ್‌ ಕಾಲೊನಿ ನಿವಾಸಿ
ವಾರ್ಡ್‍ನಲ್ಲಿ ರಸ್ತೆಗಳು ಉತ್ತಮವಾಗಿವೆ. ಬೀದಿಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಹಲವಡೆ ಅಳಗುಂಡಿ (ಮ್ಯಾನ್‍ಹೋಲ್) ಮುಚ್ಚಳಗಳು ಹಾಳಾಗಿವೆ. ಮುಚ್ಚಳ ಹಾಕಿಸಲು ಕ್ರಮವಹಿಸಬೇಕು
ಸುನೀಲ ಬೊಸ್ಲೆ ದುರ್ಗಾ ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.