ADVERTISEMENT

2021ರಲ್ಲೇ ರಾಷ್ಟ್ರೀಯ ಮಾನ್ಯತೆ: ‘ಧಾರವಾಡಿ ಎಮ್ಮೆ’ ತಳಿ ಸಂವರ್ಧನೆಗಿಲ್ಲ ಕ್ರಮ

ಗೋವರ್ಧನ ಎಸ್‌.ಎನ್‌.
Published 12 ಆಗಸ್ಟ್ 2025, 23:47 IST
Last Updated 12 ಆಗಸ್ಟ್ 2025, 23:47 IST
ಧಾರವಾಡಿ ಎಮ್ಮೆ 
ಧಾರವಾಡಿ ಎಮ್ಮೆ    

ಹುಬ್ಬಳ್ಳಿ: ವಿಶೇಷ ತಳಿಯಾದ ‘ಧಾರವಾಡಿ ಎಮ್ಮೆ’ಗೆ 2021ರಲ್ಲೇ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಆದರೆ, ತಳಿ ಸಂವರ್ಧನೆಗೆ ಈವರೆಗೆ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ. 

ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಪಶು ಸಂಗೋಪನೆ ವಿಭಾಗವು 2021ರಲ್ಲಿ ನಡೆಸಿದ್ದ ಸಭೆಯಲ್ಲಿ ‘ಧಾರವಾಡಿ ತಳಿ’ ಎಮ್ಮೆಗೆ ‘ಇಂಡಿಯಾ ಬಫೆಲೊ_0800_ಧಾರವಾಡಿ_01018’ ಎಂದು ತಳಿ ಪ್ರವೇಶ ಸಂಖ್ಯೆ ನೀಡಿತು. ಎಮ್ಮೆಗಳಲ್ಲೇ ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಎಂಬ ಹಿರಿಮೆಯೊಂದಿಗೆ, ಜಾಗತಿಕ ಮನ್ನಣೆ ದೊರೆತ ದೇಶದ 18 ಎಮ್ಮೆ ತಳಿಗಳ ಸಾಲಿಗೆ ಇದು ಸೇರ್ಪಡೆಯಾಯಿತು.

ವಿವಿಧ ತಳಿಯ ಜಾನುವಾರುಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ದೇಶದ ಹಲವೆಡೆ ಸಂವರ್ಧನಾ ಕೇಂದ್ರಗಳಿವೆ. ಧಾರವಾಡ ಸಮೀಪದ ತೇಗೂರಿನಲ್ಲಿ ಮುರ‍್ರಾ ಹಾಗೂ ಸುರ್ತಿ ತಳಿ ಎಮ್ಮೆಗಳ ಸಂವರ್ಧನಾ ಪ್ರಕ್ರಿಯೆ ನಡೆಯುತ್ತಿದೆ. ಅಳಿವಿನಂಚಿನ ಕೃಷ್ಣಾ ವ್ಯಾಲಿ ಆಕಳುಗಳನ್ನೂ ಸಂರಕ್ಷಿಸಲಾಗಿದೆ. ಆದರೆ, ಸ್ಥಳೀಯ ತಳಿಯ ಅಭಿವೃದ್ಧಿ ಕೇಂದ್ರ ಸ್ಥಾಪಿಸದಿರುವುದು ರೈತರ, ಹೈನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ.  

ADVERTISEMENT

‘ಕೃಷಿ ವಿ.ವಿ ಪ್ರಾಣಿ ವಿಜ್ಞಾನ ವಿಭಾಗದ ಪ್ರಯತ್ನದ ಫಲವಾಗಿ ಶುದ್ಧ ತಳಿಯ ಧಾರವಾಡಿ ಎಮ್ಮೆಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿತು. ತಳಿ ಸಂವರ್ಧನೆಗೆ ಪೂರಕ ಬೆಳವಣಿಗೆಗಳು ಆಗಲಿಲ್ಲ’ ಎಂದು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್‌.ಕುಲಕರ್ಣಿ ತಿಳಿಸಿದರು.

‘ಈ ತಳಿಯ ಉತ್ಕೃಷ್ಟವಾದ 200 ಎಮ್ಮೆಗಳನ್ನು ಸಾಕಣೆದಾರರಿಂದ ಖರೀದಿಸಿ, ಫಾರಂನಲ್ಲಿ ಸಂರಕ್ಷಿಸಬೇಕು. ಹಾಲಿನ ಸಾಮರ್ಥ್ಯ ಸೇರಿ ವಿವಿಧ ವಿಷಯಗಳ ಕುರಿತು ಎರಡು ವರ್ಷ ಸಂಶೋಧನೆ ಮಾಡಬೇಕು. ಈ ತಳಿಯ ಎಮ್ಮೆಗೆ ಜನಿಸಿದ ಕೋಣಗಳಿಂದ ವೀರ್ಯ ಪಡೆದು, ಕೃತಕ ಗರ್ಭಧಾರಣೆಯಿಂದ ಅವುಗಳ ತಳಿ ಅಭಿವೃದ್ಧಿಪಡಿಸಬೇಕು’ ಎಂದರು.

ಧಾರವಾಡಿ ತಳಿ ಸಂವರ್ಧನೆ ಪಶು ಇಲಾಖೆ ವ್ಯಾಪ್ತಿಗೆ ಬರಲ್ಲ. ಹೀಗಾಗಿ ಪ್ರಸ್ತಾವ ಸಲ್ಲಿಸಲು ಆಗದು. ಅದಕ್ಕೆ ಪ್ರತ್ಯೇಕ ವಿಭಾಗವಿದೆ
ಡಾ. ಸದಾಶಿವ ಉಪ್ಪಾರ್‌ ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಕಲಿಕೆ ಉದ್ದೇಶಕ್ಕಾಗಿ 12 ಎಮ್ಮೆಗಳನ್ನು ಪೋಷಿಸಲಾಗುತ್ತಿದೆ. ತಳಿ ಸಂವರ್ಧನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಅನುದಾನ ಸಿಕ್ಕರೆ ಅನುಕೂಲ
ಡಾ. ಅನಿಲ್ ಕುಮಾರ್‌ ಜಿ.ಕೆ ಮುಖ್ಯಸ್ಥ ಪ್ರಾಣಿ ವಿಜ್ಞಾನ ವಿಭಾಗ ಕೃಷಿ ವಿಶ್ವವಿದ್ಯಾಲಯ
ಧಾರವಾಡಿ ತಳಿ ಅಭಿವೃದ್ಧಿಗೆ ಸರ್ಕಾರ ಶೀಘ್ರವೇ ಕ್ರಮ ವಹಿಸಬೇಕು. ರೈತರಿಗೆ ಸಬ್ಸಿಡಿ ದರದಲ್ಲಿ ಈ ತಳಿಯ ಎಮ್ಮೆ ನೀಡಬೇಕು
ವೀರೇಶ ಸೊಬರದಮಠ ರೈತ ಮುಖಂಡ
‘ಪೇಢೆ ಕುಂದಾ ಕರದಂಟಿಗೆ ಬಳಕೆ’
2021ರ ಅಂಕಿ ಅಂಶ ಪ್ರಕಾರ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಕಾಣಸಿಗುವ ‘ಧಾರವಾಡಿ ತಳಿ’ಯ ಎಮ್ಮೆಗಳ ಸಂಖ್ಯೆ 12.05 ಲಕ್ಷ ಇದೆ. ಈ ತಳಿ ಎಮ್ಮೆ ಜೀವಿತಾವಧಿಯಲ್ಲಿ ಐದಕ್ಕೂ ಹೆಚ್ಚು ಬಾರಿ ಕರು ಹಾಕುತ್ತದೆ. 10 ತಿಂಗಳವರೆಗೆ 970 ಲೀಟರ್ ಹಾಲುನೀಡಲಿದೆ. ಕೊಟ್ಟಿಗೆಯಲ್ಲೇ ಸಾಕಿದಾಗ ‘ಸುರ್ತಿ’ ತಳಿಯ ಎಮ್ಮೆಯಷ್ಟೇ (1200 ಲೀಟರ್) ಹಾಲು ಕೊಟ್ಟಿತ್ತು. ‘ಈ ತಳಿ ಎಮ್ಮೆಗಳ ಹಾಲಿನಲ್ಲಿ ಶೇ 7ರಷ್ಟು ಕೊಬ್ಬಿನ ಅಂಶ ಇದೆ. ಧಾರವಾಡ ಪೇಢೆ ಬೆಳಗಾವಿ ಕುಂದಾ ಜಮಖಂಡಿ ಕಲ್ಲಿ ಪೇಢೆ ಗೋಕಾಕ ಮತ್ತು ಅಮೀನಗಡ ಕರದಂಟು ತಿನಿಸುಗಳಿಗೆ ಬಳಕೆಯಾಗುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಕುಲಕರ್ಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.