
ಧಾರವಾಡ: ‘ಡಿಜಿಟಲ್ ಇಂಡಿಯಾ ಹಾಗೂ ಸುಗಮ ಜೀವನ ಯೋಜನೆಯಡಿ ಪಿಂಚಣಿದಾರರ ಡಿಜಿಟಲ್ ಸಬಲೀಕರಣಕ್ಕಾಗಿ ನ.30ರವರೆಗೆ ರಾಷ್ಟ್ರ ವ್ಯಾಪಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಕೇಂದ್ರ ಪಿಂಚಣಿದಾರರ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ದೀಪಕ ಗುಪ್ತ ತಿಳಿಸಿದರು.
ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿ ಶುಕ್ರವಾರ ನಡೆದ ಪಿಂಚಣಿದಾರರಿಂದ ನಾಲ್ಕನೇ ಆವೃತಿಯ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಶಿಬಿರದಲ್ಲಿ ಮಾತನಾಡಿದರು.
ತಂತ್ರಜ್ಞಾನದ ಬಳಕೆಯ ಮೂಲಕ ಹಿರಿಯ ನಾಗರಿಕರು ಮತ್ತು ಪಿಂಚಣಿದಾರರ ವ್ಯವಹಾರ ಸರಾಗಗೊಳಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪಿಂಚಣಿದಾರರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವ ಮತ್ತು ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಸಲ್ಲಿಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
‘ಪಿಂಚಣಿದಾರರಿಗೆ ನವೆಂಬರ್ ತಿಂಗಳು ಮಹತ್ವದ್ದಾಗಿದ್ದು, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಅವರು ಮನೆಯಿಂದಲೇ ಸೌಲಭ್ಯಗಳನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಅನಾರೋಗ್ಯಪೀಡಿತರು, ಅಶಕ್ತರು ಮತ್ತು ನಡೆಯಲಾಗದ ವೃದ್ಧ ಪಿಂಚಣಿದಾರರು ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗಳಿಗೆ ತೆರಳಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಅಂಚೆ ಇಲಾಖೆ ಮುಂದಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಸಹಭಾಗಿತ್ವದಲ್ಲಿ ಪಿಂಚಣಿದಾರಿಗೆ ಜೀವನ ಪ್ರಮಾಣ ಪತ್ರ ನೀಡಲಾಗುತ್ತದೆ. ಅಶಕ್ತ ಪಿಂಚಣಿದಾರರ ಮನೆಗೂ ತೆರಳಿ ಜೀವನ ಪ್ರಮಾಣ ಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಜಗದೀಶ ಚಿಕ್ಕನರಗುಂದ, ಧಾರವಾಡ ಶಾಖಾಧಿಕಾರಿ ದರ್ಶನ, ಪ್ರಧಾನ ಅಂಚೆ ಕಚೇರಿಯ ಅಧಿಕಾರಿ ಪಾರ್ವತಿ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.