ADVERTISEMENT

ಜಾಹೀರಾತು ಪ್ರದರ್ಶನಕ್ಕೆ ಡಿಜಿಟಲ್ ಬೋರ್ಡ್‌

ಸ್ಮಾರ್ಟ್‌ ಸಿಟಿಯಿಂದ ಹುಬ್ಬಳ್ಳಿ–ಧಾರವಾಡದ 30 ಕಡೆ ಅಳವಡಿಕೆ

ಸತೀಶ ಬಿ.
Published 18 ಮೇ 2023, 23:30 IST
Last Updated 18 ಮೇ 2023, 23:30 IST

ಹುಬ್ಬಳ್ಳಿ: ಜಾಹೀರಾತಿಗಾಗಿ ಹಾಕಲಾಗುತ್ತಿದ್ದ ಪೋಸ್ಟರ್, ಬ್ಯಾನರ್, ಫ್ಲೆಕ್ಸ್‌ಗಳಿಂದ ನಗರದ ಅಂದ ಹಾಳಾಗುವುದನ್ನು ತಡೆಯಲು ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ, ಸ್ಮಾರ್ಟ್‌ ಸಿಟಿ ವತಿಯಿಂದ ಅವಳಿ ನಗರದಲ್ಲಿ ‘ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌‘ಗಳನ್ನು ಅಳವಡಿಸಲಾಗಿದೆ.

₹4.17 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಜನಸಂದಣಿ ಹೆಚ್ಚಾಗಿರುವ ಪ್ರಮುಖ 30 ಸ್ಥಳಗಳಲ್ಲಿ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ರಾಜಕೀಯ ಪಕ್ಷಗಳು, ಸಂಘ–ಸಂಸ್ಥೆಗಳು, ಖಾಸಗಿ ಕಂಪನಿಗಳು ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಜಾಹೀರಾತು ಪ್ರದರ್ಶಿಸಬಹುದಾಗಿದೆ.

ಹುಬ್ಬಳ್ಳಿಯ ತೋಳನಕೆರೆ, ಉಣಕಲ್ ಕೆರೆ, ಕೇಶ್ವಾಪುರ ವೃತ್ತ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ವಿದ್ಯಾನಗರ, ಸಿಬಿಟಿ ಮತ್ತು ಧಾರವಾಡದ ಕೆ.ಸಿ. ಪಾರ್ಕ್, ಪಾಲಿಕೆ ಆಯುಕ್ತರ ಕಚೇರಿ, ಬಸ್ ನಿಲ್ದಾಣ, ಎನ್‌ಟಿಟಿಎಫ್, ದಾಂಡೇಲಿ ರಸ್ತೆ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದೆ.

ADVERTISEMENT

‘ಬೋರ್ಡ್‌ಗಳ ಅಳವಡಿಕೆ ಹೊಣೆಯನ್ನು ಬೆಂಗಳೂರಿನ ಸಂಜಯ್ ಮಾರ್ಕೆಟಿಂಗ್ ಕಂಪನಿಗೆ ವಹಿಸಲಾಗಿದೆ. ಐದು ವರ್ಷ ಅವರೇ ನಿರ್ಹಹಣೆ ಮಾಡಲಿದ್ದಾರೆ. ಸಣ್ಣ ಸಮಸ್ಯೆಗಳಿದ್ದರೆ ಅವುಗಳನ್ನು ಪ‍ರಿಹರಿಸಿ, ಮಹಾನಗರ ಪಾಲಿಕೆಯೊಂದಿಗೆ ಜಂಟಿ ಪರಿಶೀಲನೆ ಮಾಡಿದ ಬಳಿಕ, ಶೀಘ್ರ ಇವುಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಗುವುದು' ಎಂದು ಹು–ಧಾ ಸ್ಮಾರ್ಟ್ ಸಿಟಿ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಾಹೀರಾತು ದರ ನಿಗದಿ, ಸಂಗ್ರಹದ ಕೆಲಸವನ್ನು ಪಾಲಿಕೆ ನೋಡಿಕೊಳ್ಳಲಿದೆ. ಬೋರ್ಡ್‌ಗಳ ನಿಯಂತ್ರಣವನ್ನು ಸ್ಮಾರ್ಟ್‌ ಸಿಟಿ ಸಂಸ್ಥೆಯಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ನಿಂದ (ಐಸಿಸಿಸಿ) ನಿಯಂತ್ರಿಸಲಾಗುವುದು. ಸರ್ಕಾರದ ಯೋಜನೆಗಳು ಹಾಗೂ ಜಾಗೃತಿ ಸಂದೇಶವನ್ನು ಇಲ್ಲಿ ಪ್ರದರ್ಶಿಸಬಹುದಾಗಿದೆ’ ಎಂದು ಹೇಳಿದರು.

‘ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಯುಪಿಎಸ್ ಮೂಲಕ ಬೋರ್ಡ್‌ಗಳು ಕಾರ್ಯನಿರ್ವಹಿಸಲಿವೆ. ಕೆಲವೆಡೆ ದಿನದ 24 ಗಂಟೆ ಹಾಗೂ ಜನದಟ್ಟಣೆ ಕಡಿಮೆ ಇರುವ ಕಡೆ ರಾತ್ರಿ 11 ಗಂಟೆಗೆ ಬಂದ್ ಮಾಡಿ, ಮತ್ತೆ ಬೆಳಿಗ್ಗೆ 6 ಗಂಟೆಗೆ ಚಾಲೂ ಮಾಡಲಾಗುತ್ತದೆ. ಯಾವ ಜಾಹೀರಾತುಗಳನ್ನು ಪ್ರದರ್ಶಿಸಬೇಕು ಎಂಬುದನ್ನು ಪಾಲಿಕೆಯೇ ನಿರ್ಧರಿಸುತ್ತದೆ’ ಎಂದು ತಿಳಿಸಿದರು.

‘ಫ್ಲೆಕ್ಟ್‌, ಬ್ಯಾನರ್‌ಗಳನ್ನು ಒಂದು ಸಾರಿ ಅಳವಡಿಸಿದ ನಂತರ ಮತ್ತೆ ಅವುಗಳನ್ನು ಮರುಬಳಕೆ ಮಾಡಲು ಬರುವುದಿಲ್ಲ. ಪ್ಲಾಸ್ಟಿಕ್‌ನಿಂದಾಗಿ ಪರಿಸರ ಮಾಲಿನ್ಯವೂ ಆಗುತ್ತದೆ. ಡಿಜಿಟಲ್ ಬೋರ್ಡ್ ಮೂಲಕ ಯಾವಾಗ ಬೇಕಾದರೂ ಅದನ್ನು ಪ್ರದರ್ಶಿಸಬಹುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.