ಧಾರವಾಡ: ‘ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿ ಜನರು ಹೊಸ ಬಟ್ಟೆ, ಹೂ, ಹಣ್ಣು, ಆಕಾಶ ಬುಟ್ಟಿ, ಹಣತೆ, ಪಟಾಕಿ ಸೇರಿ ಇತರೆ ವಸ್ತುಗಳನ್ನು ಖರೀದಿಸುತ್ತಿರುವುದು ಭಾನುವಾರ ಕಂಡುಬಂತು.
ನಗರದ ಸುಭಾಷ ರಸ್ತೆ, ಸೂಪರ್ ಮಾರುಕಟ್ಟೆ, ಅಕ್ಕಿಪೇಟೆ, ಟಿಕಾರೆ ರಸ್ತೆ ಸೇರಿದಂತೆ ವಿವಿಧೆಡೆ
ಚಿತ್ತಾಕರ್ಷಕ ಆಕಾಶ ಬುಟ್ಟಿ, ಅಲಂಕಾರಿಕ ಲೈಟಿಂಗ್ಸ್ ಮೊದಲಾದವುಗಳನ್ನು ಖರೀದಿಸಿಲು ಜನರು ಮುಗಿಬಿದ್ದರು. ಕಳೆದ ಒಂದು ವಾರದಿಂದಲೂ ಮಾರುಕಟ್ಟೆಯು ಹಬ್ಬದ ಪೂರ್ವತಯಾರಿ ಖರೀದಿಯಿಂದ ಗಮನ ಸೆಳೆಯುತ್ತಿದೆ.
ವಾರದ ಹಿಂದೆ ಕೆ.ಜಿ.ಗೆ ₹10ರಿಂದ ₹20 ಇದ್ದ ಚೆಂಡು ಹೂ ದರ ಈಗ ಹಬ್ಬದ ಪ್ರಯುಕ್ತ ₹50ಕ್ಕೆ ಏರಿದೆ. ಕೆ.ಜಿ.ಯೊಂದಕ್ಕೆ ಸೇವಂತಿಗೆ ₹100, ಕನಕಾಂಬರ ₹600, ಮಲ್ಲಿಗೆ ಮಾರಿಗೆ ₹80 ಕಾಕಡ ₹400, ಅಷ್ಟರ್ ₹200, ಗುಲಾಬಿ ₹250, ಸುಗಂಧರಾಜ ₹450 ದರದಲ್ಲಿ ಮಾರಾಟ ಆಗುತ್ತಿವೆ.
‘ಕೆಲ ದಿನಗಳ ಹಿಂದೆ ಹೂವಿನ ದರ ಕಡಿಮೆ ಇತ್ತು. ದೀಪಾವಳಿ ಪ್ರಯುಕ್ತ ಲಕ್ಷ್ಮಿ ಪೂಜೆ, ವಾಹನ, ಮಳಿಗೆಗಳ ಅಲಂಕಾರ ಉದ್ದೇಶಗಳಿಗಾಗಿ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ದರದಲ್ಲಿ ಏರಿಕೆಯಾಗಿದೆ’ ಎಂದು ವ್ಯಾಪಾರಿ ಕೃಷ್ಣ ಕಟ್ಟಿ ತಿಳಿಸಿದರು.
ಕೆ.ಜಿ.ಗೆ ಸೇಬು ₹180, ಪೇರಳೆ ₹110, ಏಲಕ್ಕಿ ಬಾಳೆಹಣ್ಣು ₹100, ಮೂಸಂಬಿ ₹150, ಕಪ್ಪು ದ್ರಾಕ್ಷಿ ₹120, ಸೀತಾಫಲ ₹100, ದಾಳಿಂಬೆ ₹220, ಚಿಕ್ಕು ಹಣ್ಣು ₹100, ಬೂದುಗುಂಬಳ ಗಾತ್ರದ ಆಧಾರದ ಮೇಲೆ ₹60ರಿಂದ ₹200ರವರೆಗೆ ಮಾರಲಾಗುತ್ತಿದೆ. ಜೋಡಿ ಕಬ್ಬು ₹50, ಬಾಳೆದಿಂಡಿಗೆ ₹50- ₹100, ಮಾವಿನ ತಳಿರು ಕಟ್ಟಿಗೆ ₹20 ಮಾರಾಟ ಮಾಡಲಾಗುತ್ತಿದೆ.
ಮಕ್ಕಳಿಗೆ ಪಟಾಕಿ ಅಂದರೆ ಇಷ್ಟ. ಮಕ್ಕಳ ಇಷ್ಟವನ್ನೂ ನೋಡಿಕೊಂಡು ಪರಿಸರಕ್ಕೂ ಹಾನಿಯಾಗದಂತಹ ಪಟಾಕಿಗಳನ್ನು ಖರೀದಿಸಿದ್ದೇವೆಪ್ರಕಾಶ ಮುದಗ ಧಾರವಾಡ
ಈ ಬಾರಿಯೂ ಹಬ್ಬದ ಸಂದರ್ಭದಲ್ಲಿ ತರಕಾರಿ ಹಣ್ಣು ಹೂವಿನ ದರ ಹೆಚ್ಚಾಗಿದೆ. ಆದರೆ ಕೊಂಡುಕೊಳ್ಳುವ ಅನಿವಾರ್ಯತೆ ನಮಗಿದೆಸಿದ್ದರಾಮ ಹಡಪದ ಧಾರವಾಡ
ಗಮನ ಸೆಳೆದ ಆಕಾಶಬುಟ್ಟಿ
ಚಿತ್ತಾರ ನಗರದ ಹಲವು ಅಂಗಡಿಗಳ ಎದುರು ನೇತುಹಾಕಿದ್ದ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿವೆ. ನಕ್ಷತ್ರ ಮಾದರಿ ಕಂದಿಲು ಕಾಕಾದರ ಆಕಾಶ ಬುಟ್ಟಿಗಳು ಗುಲಾಬ್ ರಂಗೀಲಾ ಚಂದ್ರನ ಆಕಾರದ ಆಕಾಶಹುಟ್ಟಿ ಇಳಕ್ಕ ಸೀರೆ ಆಕಾಶ ಬುಟ್ಟಿಗಳು ಆಕರ್ಷಿಸುತ್ತಿವೆ. ‘ಮಹಾರಾಷ್ಟ್ರ ದೆಹಲಿ ರಾಜಸ್ತಾನ ಮೊದಲಾದ ಕಡೆಗಳಿಂದ ವಿವಿಧ ವಿನ್ಯಾಸದ ಆಕಾಶ ಬುಟ್ಟಿಗಳು ಬಂದಿದ್ದು ಮಾರುಕಟ್ಟೆಯುದ್ದಕ್ಕೂ ಕಂಗೊಳಿಸುತ್ತಿವೆ. ವರ್ಣ ವೈವಿಧ್ಯ ಹಾಗೂ ಗಾತ್ರವನ್ನು ಆಧರಿಸಿ ಆಕಾಶಬುಟ್ಟಿಯ ದರವು ಕನಿಷ್ಠ ₹150ರಿಂದ ಗರಿಷ್ಠ ₹1500ರವರೆಗೂ ದರವಿದೆ. ಕಳೆದ ಒಂದು ವಾರದಿಂದಲೂ ಆಕಾಶಬುಟ್ಟಿಗಳು ಹೆಚ್ಚು ಮಾರಾಟವಾಗುತ್ತಿವೆ’ ಎಂದು ವ್ಯಾಪಾರಿ ಮಲ್ಲೇಶ ತಿಳಿಸಿದರು.
ಹಸಿರು ಪಟಾಕಿಗೆ ಬೇಡಿಕೆ
'ನಗರದ ಕಡಪಾ ಮೈದಾನದಲ್ಲಿ 15ಕ್ಕೂ ಹೆಚ್ಚು ಪಟಾಕಿ ಮಾರಾಟ ಮಳಿಗೆಗಳನ್ನು ಹಾಕಲಾಗಿದೆ. ದೀಪಾವಳಿ ಹಬ್ಬಕ್ಕೆ ಸಡಗರ ಹೆಚ್ಚಿಸುವುದಕ್ಕಾಗಿ ಕೆಲವರು ಹಸಿರು ಪಟಾಕಿಗಳನ್ನು ಖರೀದಿಸಿದರು. ಮಕ್ಕಳನ್ನು ಸೆಳೆಯಲು ಫ್ಯಾನ್ಸಿ ಪಟಾಕಿಗಳೇ ಈ ಬಾರಿ ಹೆಚ್ಚಿವೆ. ಪಿಜ್ಜಾ ಫಿಶ್ ಗಿಟಾರ್ ಗೋಲ್ಡನ್ ಡಕ್ ಜಂಗಲ್ ಫ್ಯಾಂಟಸಿ ಪಟಾಕಿಗಳು ಮಕ್ಕಳನ್ನು ಪ್ರಭಾವಿಸುತ್ತಿವೆ. ಬಟ್ಟೆ ಅಂಗಡಿಗಳಲ್ಲಿಯೂ ಗ್ರಾಹಕರ ದಟ್ಟಣೆ ಇದೆ. ಕೆಲವು ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ನೀಡಲಾಗಿದ್ದು, ಜನಜಂಗುಳಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.