ADVERTISEMENT

ಹುಬ್ಬಳ್ಳಿ | ದೀಪಾವಳಿ: ಗರಿಗೆದರಿದ ಮಾರುಕಟ್ಟೆ

ವಿವಿಧ ವಿನ್ಯಾಸದ ಆಕರ್ಷಕ ಆಕಾಶಬುಟ್ಟಿ, ಆಲಂಕಾರಿಕ ವಸ್ತುಗಳ ಮಾರಾಟ ಜೋರು

ಎಲ್‌.ಮಂಜುನಾಥ
Published 18 ಅಕ್ಟೋಬರ್ 2025, 5:09 IST
Last Updated 18 ಅಕ್ಟೋಬರ್ 2025, 5:09 IST
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಶುಕ್ರವಾರ ಆಕಾಶಬುಟ್ಟಿಗಳನ್ನು ನೇತುಹಾಕಲಾಗಿತ್ತು
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಶುಕ್ರವಾರ ಆಕಾಶಬುಟ್ಟಿಗಳನ್ನು ನೇತುಹಾಕಲಾಗಿತ್ತು   

ಹುಬ್ಬಳ್ಳಿ: ದೀಪಾವಳಿ ಹಬ್ಬ ಹೊಸ್ತಿಲಲ್ಲಿದೆ. ಈಗಾಗಲೇ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬಕ್ಕೆ ಬೇಕಾದ ಆಕರ್ಷಕ ವಿನ್ಯಾಸದ ಆಕಾಶಬುಟ್ಟಿ, ಮನೆಯ ಆಲಂಕಾರಿಕ ವಸ್ತುಗಳ ಮಾರಾಟ ತುಸು ಜೋರಾಗಿಯೇ ನಡೆದಿದೆ.

ದುರ್ಗದಬೈಲ್‌, ಜನತಾ ಬಜಾರ್‌, ಕೊಪ್ಪಿಕರ ರಸ್ತೆ, ದಾಜಿಬಾನ್ ಪೇಟೆ ಮುಖ್ಯರಸ್ತೆ, ಷಾ ಬಜಾರ್‌, ಸಿಬಿಟಿ ಸೇರಿದಂತೆ ನಗರದ ವಿವಿಧೆಡೆ ಇರುವ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಗ್ರಾಹಕರಿಂದ ಗಿಜಿಗುಡುತ್ತಿವೆ. ಮಹಿಳೆಯರು ಕುಟುಂಬ ಸಮೇತರಾಗಿ ಹಬ್ಬಕ್ಕೆ ಪೂರಕವಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ. 

ಇಲ್ಲಿನ ಮಾಲ್‌, ಬಟ್ಟೆ ಅಂಗಡಿ ಹಾಗೂ ಚಿನ್ನಾಭರಣ ಮಾರಾಟ ಮಳಿಗೆಗಳು ಗ್ರಾಹಕರಿಂದ ತುಂಬಿದ್ದು, ಖರೀದಿ ಭರಾಟೆ ಜೋರಾಗಿದೆ. ದೊಡ್ಡ ಬಟ್ಟೆ ಅಂಗಡಿಗಳು ಹಬ್ಬದ ಪ್ರಯುಕ್ತ ರಿಯಾಯಿತಿ ಹಾಗೂ ವಿಶೇಷ ಕೊಡುಗೆಗಳನ್ನೂ ಘೋಷಿಸಿವೆ.  

ADVERTISEMENT

ಚಿನ್ನ, ಬೆಳ್ಳಿಯ ಬೆಲೆ ಏರಿಕೆಯಾದರೂ ಚಿನ್ನಾಭರಣ ಮಾರಾಟ ಮಳಿಗೆಗಳಲ್ಲಿ ಮಹಿಳೆಯರು ಕುಟುಂಬ ಸಮೇತರಾಗಿ ಆಭರಣ ಖರೀದಿಸುತ್ತಿದ್ದು, ಇದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. 

ಆಕರ್ಷಕ ಆಕಾಶಬುಟ್ಟಿ: ದೀಪಾವಳಿ ಎಂದಾಕ್ಷಣ ನೆನಪಾಗುವುದು ದೀಪ, ಮಣ್ಣಿನ ಹಣತೆ ಮತ್ತು ಆಕರ್ಷಕ ಆಕಾಶಬುಟ್ಟಿಗಳು. ಹಬ್ಬದ ದಿನಗಳಲ್ಲಿ ಮನೆಯ ಮುಂದೆ ದೀಪ ಬೆಳಗಿಸುವುದು, ಬಣ್ಣ ಬಣ್ಣದ ಆಲಂಕಾರಿಕ, ಆಕರ್ಷಕ ವಿನ್ಯಾಸದ ಆಕಾಶಬುಟ್ಟಿಗಳನ್ನು ಬಾಗಿಲ ಬಳಿ ನೇತು ಹಾಕುವುದೆಂದರೆ ಎಲ್ಲರಿಗೂ ಸಂಭ್ರಮ. ಅದರಲ್ಲೂ ಮಕ್ಕಳು, ಮಹಿಳೆಯರಿಗೆ ತುಂಬಾನೇ ಖುಷಿ.

ಮಾರುಕಟ್ಟೆಗೆ ಆಕರ್ಷಕವಾದ ವಿವಿಧ ವಿನ್ಯಾಸದ ಬಣ್ಣ ಬಣ್ಣದ ಆಕಾಶಬುಟ್ಟಿಗಳು ಈಗಾಗಲೆ ಲಗ್ಗೆಯಿಟ್ಟಿವೆ. ಇಲ್ಲಿನ ದುರ್ಗದಬೈಲ್‌, ಜನತಾ ಬಜಾರ್‌, ಕೊಪ್ಪಿಕರ್‌ ರಸ್ತೆಯಲ್ಲಿನ ಮಳಿಗೆಗಳ ಮುಂದೆ ವ್ಯಾಪಾರಿಗಳು ಸಾಲು ಸಾಲಾಗಿ ವಿವಿಧ ವಿನ್ಯಾಸ ಆಕಾಶಬುಟ್ಟಿಗಳನ್ನು ನೇತು ಹಾಕಿ, ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. 

ವಿದ್ಯುತ್‌ ದೀಪಾಲಂಕಾರ ಹೊಂದಿರುವ ಪ್ಲಾಸ್ಟಿಕ್‌, ಫೈಬರ್‌ ಮತ್ತು ಜಲನಿರೋಧಕ ಅಂಶವನ್ನು ಒಳಗೊಂಡಿರುವ ಚೌಕಾಕಾರ, ಗೋಲಾಕಾರ, ಬುಗುರಿ ಆಕಾರ, ಪಿರಾಮಿಡ್‌ ಆಕಾರ ಹಾಗೂ ನಕ್ಷತ್ರ ಆಕಾರದ ವೈವಿಧ್ಯಮಯ ಆಕಾಶಬುಟ್ಟಿಗಳನ್ನು ಮಾರಾಟಕ್ಕಿಡಲಾಗಿದೆ. 

‘ಆಕರ್ಷಕ ವಿನ್ಯಾಸದ ಆಕಾಶಬುಟ್ಟಿಗಳನ್ನು ಬೆಳಗಾವಿ, ಹೈದರಾಬಾದ್‌ ಹಾಗೂ ರಾಜಸ್ಥಾನದಿಂದ ಖರೀದಿಸಿ, ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದೇವೆ. ಬೆಲೆ ದುಬಾರಿಯಾಗಿದೆ. ಕಳೆದ ಬಾರಿ ಸಾಧಾರಣ ವಿನ್ಯಾಸದ ಆಕಾಶ ಬುಟ್ಟಿಯನ್ನು ₹100ಕ್ಕೆ ಮಾರಿದ್ದೆವು. ಈ ಬಾರಿ ₹200ರಿಂದ ₹300ರ ತನಕ ದರವಿದೆ’ ಎನ್ನುತ್ತಾರೆ ದುರ್ಗದಬೈಲ್‌ ಮಾರುಕಟ್ಟೆಯಲ್ಲಿನ ಆಕಾಶಬುಟ್ಟಿಗಳ ವ್ಯಾಪಾರಿ ರಫಿಕ್‌. 

‘ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಕರ್ಷಕವಾದ ಆಕಾಶ ಬುಟ್ಟಿಗಳು ₹200ರಿಂದ ₹2 ಸಾವಿರದರೆಗೂ ಮಾರುಕಟ್ಟೆಯಲ್ಲಿ ಸಿಗುತ್ತವೆ. ಕೆಲ ಸ್ಥಿತಿವಂತರು ಮಕ್ಕಳ ಸಂಭ್ರಮಕ್ಕಾಗಿಯೇ ವಿವಿಧ ವಿನ್ಯಾಸದ ದೊಡ್ಡ ಆಕಾಶಬುಟ್ಟಿಗಳನ್ನು ಖರೀದಿಸುತ್ತಾರೆ’ ಎಂದರು. 

‘ದೀಪಾವಳಿ ಹಬ್ಬದಲ್ಲಿ ದೀಪಗಳಷ್ಟೇ ಮಹತ್ವ ಆಕಾಶಬುಟ್ಟಿಗಳಿಗೂ ಇದೆ. ಸಾಲು ದೀಪಗಳ ಬೆಳಕಿನ ಜೊತೆಗೆ ಮನೆಗಳ ಮುಂದೆ ಚಿತ್ತಾರದ ಬೆಳಕು ಚೆಲ್ಲುವ ಆಕಾಶಬುಟ್ಟಿಗಳನ್ನು ನೇತು ಹಾಕಿದರೆ, ಮನೆ ಚೆಂದವಾಗಿ ಕಾಣುತ್ತದೆ. ಹೀಗಾಗಿ, ಆಕಾಶಬುಟ್ಟಿ ಖರೀದಿಸಲು ಬಂದಿದ್ದೇವೆ’ ಎಂದು ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಆಕಾಶಬುಟ್ಟಿ ಖರೀದಿಸುತ್ತಿದ್ದ ಗೃಹಿಣಿ ಲಕ್ಷ್ಮಿ ಸಂಭ್ರಮದಿಂದ ಹೇಳಿದರು.  

ಹುಬ್ಬಳ್ಳಿಯ ದುರ್ಗದಬೈಲ್‌ ವೃತ್ತದಲ್ಲಿ ಶುಕ್ರವಾರ ಪ್ಲಾಸ್ಟಿಕ್‌ ಬಾಗಿಲು ತೋರಣಗಳ ಮಾರಾಟ ಜೋರಾಗಿತ್ತು 
ಹುಬ್ಬಳ್ಳಿಯ ಕೊಪ್ಪಿಕರ್‌ರಸ್ತೆಯಲ್ಲಿ ಶುಕ್ರವಾರ ಮಣ್ಣಿನ ಕಲಾತ್ಮಕ ಹಣತೆಗಳನ್ನು ಮಾರಾಟಕ್ಕಿಡಲಾಗಿತ್ತು
ದಸರಾ ಹಬ್ಬದ ಸಮಯದಲ್ಲಿ ಹೆಚ್ಚು ಬಟ್ಟೆ ಮಾರಾಟವಾಗಲಿಲ್ಲ. ದೀಪಾವಳಿ ಹಬ್ಬಕ್ಕೆ ಜನರು ಬಟ್ಟೆ ಖರೀದಿಸುತ್ತಿದ್ದಾರೆ. ಮೊದಲಿನಂತೆ ವ್ಯಾಪಾರ ನಡೆಯುತ್ತಿದೆ
ಸೈಯದ್‌ ಅನ್ವರ್ ಬಟ್ಟೆ ವ್ಯಾಪಾರಿ ದುರ್ಗದಬೈಲ್‌

ಮಣ್ಣಿನ ಹಣತೆಗೆ ಬೇಡಿಕೆ 

ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿವಿಧ ವಿನ್ಯಾಸದ ಆಲಂಕಾರಿಕ ಮಣ್ಣಿನ ಹಣತೆಗಳಿಗೆ ಬೇಡಿಕೆ ಹೆಚ್ಚಿದೆ. ದುರ್ಗದಬೈಲ್‌ ಜನತಾ ಬಜಾರ್‌ ಕೊಪ್ಪಿಕರ್‌ ರಸ್ತೆ ಬದಿಯಲ್ಲಿ ಕಲಾತ್ಮಕವಾದ ಮಣ್ಣಿನ ಹಣತೆಗಳ ಮಾರಾಟವಾಗುತ್ತಿವೆ. ಆಕರ್ಷಕವಾದ ಈ ಹಣತೆಗಳಿಗೆ ಬೆಲೆ ಹೆಚ್ಚಿದೆ.  ಮಣ್ಣಿನ ಸಾಧಾರಣ ದೀಪಗಳು ₹10ಕ್ಕೆ ಎರಡು ಮಾರಾಟವಾಗುತ್ತಿವೆ. ಸಣ್ಣ ಹಣತೆಗಳು ಡಜನ್‌ಗೆ ₹50ರಿಂದ ₹100 ಹಾಗೂ ವಿವಿಧ ಕಲಾಕೃತಿಯ ಹಣತೆಗಳು ಡಜನ್‌ಗೆ ₹100ರಿಂದ ₹300ರ ತನಕ ಬೆಲೆ ನಿಗದಿ ಮಾಡಲಾಗಿದೆ. ಗ್ರಾಹಕರು ತಮಗೆ ಇಷ್ಟವಾದ ಹಣತೆಗಳನ್ನು ಖರೀದಿಸುತ್ತಿದ್ದು ಸಹ ಕೊಪ್ಪಿಕರ್‌ ರಸ್ತೆಯಲ್ಲಿ ಕಂಡುಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.