ADVERTISEMENT

ಮಹದಾಯಿ ನೀರು: ಬಿಜೆಪಿ ಅಭ್ಯರ್ಥಿಗೆ ಮತ ಹಾಕದಂತೆ ಕರೆ

ನೀರು ತರದವರಿಗೆ ವೋಟ್‌ ಕೊಡುವುದಿಲ್ಲ: ಹೆಬಸೂರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 9:21 IST
Last Updated 17 ಏಪ್ರಿಲ್ 2019, 9:21 IST

ಹುಬ್ಬಳ್ಳಿ: ಮಹದಾಯಿ ನದಿ ನೀರು ಕೊಡಿಸಲು ವಿಫಲವಾದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಮತ ಹಾಕಬಾರದು. ಮಲಪ್ರಭಾ ಅಚ್ಚಕಟ್ಟು ಪ್ರದೇಶಗಳ ಜಿಲ್ಲೆಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂದು ರೈತ ಒಕ್ಕೂಟ ಕರೆ ನೀಡಿದೆ.

ಒಕ್ಕೂಟದ ಮುಖಂಡ ಹಾಗೂ ರೈತ ಮುಖಂಡ ಲೋಕನಾಥ ಹೆಬಸೂರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮೂರು ಬಾರಿ ಸಂಸದರಾದರೂ ಪ್ರಹ್ಲಾದ ಜೋಶಿ ಮಹದಾಯಿ ನದಿ ನೀರು ತರಲು ಯಾವ ಕೆಲಸ ಮಾಡಿಲ್ಲ. ಎಲ್ಲವನ್ನೂ ರಾಜ್ಯ ಸರ್ಕಾರವೇ ಮಾಡಬೇಕು ಎಂದು ಹೇಳುತ್ತಾರೆ. ಎಲ್ಲವನ್ನೂ ರಾಜ್ಯವೇ ಮಾಡುವುದಾದರೆ ಪ್ರಹ್ಲಾದ ಜೋಶಿ ಈ ಭಾಗದ ಸಂಸದರಾಗಿ ಇರುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರೈತರ ಸಂಕಷ್ಟ ಹೆಚ್ಚಾಗಿವೆ. ಈ ಪಕ್ಷದ ಯಾವ ನಾಯಕರೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಆದ್ದರಿಂದ ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಹೋರಾಟಗಾರರು ಬಿಜೆಪಿ ವಿರುದ್ಧ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಎರಡು ಲಕ್ಷ ಕರಪತ್ರಗಳನ್ನು ಪ್ರಕಟಿಸಿ ನಾಲ್ಕೂ ಜಿಲ್ಲೆಗಳಲ್ಲಿ ಹಂಚುತ್ತೇವೆ’ ಎಂದರು.

ADVERTISEMENT

ರೈತ ಮುಖಂಡ ಸಿದ್ದು ತೇಜಿ ಮಾತನಾಡಿ ‘ಮೇಕೆದಾಟು, ಕಾವೇರಿ ಹೋರಾಟಕ್ಕೆ ಸಿಕ್ಕಷ್ಟು ಪ್ರಾಮುಖ್ಯತೆ ಮಹದಾಯಿ ಹೋರಾಟಕ್ಕೆ ಸಿಗುತ್ತಿಲ್ಲ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬಾರದು’ ಎಂದರು.

ಒಕ್ಕೂಟದಲ್ಲಿಯೇ ಗೊಂದಲ

ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಲು ನಿರ್ಧರಿಸಿರುವ ಒಕ್ಕೂಟ, ಮೈತ್ರಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕೊ, ಬೇಡವೊ ಎನ್ನುವ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿದೆ.

ಪತ್ರಿಕಾಗೋಷ್ಠಿಯ ಆರಂಭದಲ್ಲಿ ಹೆಬಸೂರ ‘ಬಿಜೆಪಿಯನ್ನು ವಿರೋಧಿಸಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ. ವಿನಯ ಕುಲಕರ್ಣಿ ಗೆಲುವಿಗೆ ಶ್ರಮಿಸುತ್ತೇವೆ’ ಎಂದಿದ್ದರು. ಗೋಷ್ಠಿಯಲ್ಲಿಯೇ ಇದ್ದ ಕರ್ನಾಟಕ ರೈತ ಸೇನೆಯ ಅಧ್ಯಕ್ಷ ಶಂಕರಣ್ಣ ಅಂಬಲಿ ‘ಬಿಜೆಪಿ ವಿರುದ್ಧ ಕೆಲಸ ಮಾಡುವುದು ನಿಶ್ಚಿತ. ಆದರೆ, ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದು ನಿರ್ಧಾರವಾಗಿಲ್ಲ’ ಎಂದರು. ಅಂತಿಮವಾಗಿ ಶಂಕರಣ್ಣ ‘ಇನ್ನೊಂದು ಬಾರಿ ಚರ್ಚಿಸಿ ನಮ್ಮ ನಿಲುವು ಸ್ಪಷ್ಟಪಡಿಸುತ್ತೇವೆ’ ಎಂದರು.

ರೈತ ಮುಖಂಡ ಬಾಬಾಜಾನ್‌ ಮುಧೋಳ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿ ಲಕ್ಷ್ಮಣ ಬಕಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.