ADVERTISEMENT

ಹುಬ್ಬಳ್ಳಿ ‌| ಕಿರಿಯ ವೈದ್ಯರ ಮುಷ್ಕರ; ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:52 IST
Last Updated 12 ಆಗಸ್ಟ್ 2024, 15:52 IST
ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಸೋಮವಾರ ಕಿರಿಯ ವೈದ್ಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಸೋಮವಾರ ಕಿರಿಯ ವೈದ್ಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಕೆಆರ್‌ಡಿ) ನೇತೃತ್ವದಲ್ಲಿ ಸೋಮವಾರ ರಾಜ್ಯವ್ಯಾಪಿ ನಡೆದ ಮುಷ್ಕರದಲ್ಲಿ ಕಿಮ್ಸ್‌ ಆಸ್ಪತ್ರೆ ಕಿರಿಯ ವೈದ್ಯರು ಸಹ ಪಾಲ್ಗೊಂಡರು.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ಚಿಕಿತ್ಸಾ ಘಟಕ, ಹೃದಯ ರೋಗ ವಿಭಾಗ ಹೊರತುಪಡಿಸಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಯಾರೂ ತೆರಳಲಿಲ್ಲ. ಸುಮಾರು 600 ಕಿರಿಯ ವೈದ್ಯರು ಸೇವೆಯಿಂದ ದೂರ ಉಳಿದರು. ಇದರಿಂದ  ಹಲವು ವಿಭಾಗಗಳ ಎದುರು ರೋಗಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ಬಹುತೇಕ ಜನರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗಲಿಲ್ಲ.

‘ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ತಂಡ ಸಿದ್ಧವಿದೆ’ ಎಂದು ಕಿಮ್ಸ್‌ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ್‌ ಎಸ್‌.ಟಿ. ಹೇಳಿದರು.

ADVERTISEMENT

‘ವಿಮ್ಸ್‌’ನಲ್ಲಿ ಹೆಚ್ಚಿದ ಒತ್ತಡ 

ಬಳ್ಳಾರಿ ವಿಮ್ಸ್‌ನಲ್ಲಿ ತುರ್ತು ಚಿಕಿತ್ಸಾ ಘಟಕದವರು ಹೊರತುಪಡಿಸಿ ಬಹುತೇಕ ಕಿರಿಯ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡರು. ಒಪಿಡಿಗಳಲ್ಲಿ ಕಿರಿಯ ವೈದ್ಯರಿಲ್ಲದ ಕಾರಣ ಪ್ರೊಫೆಸರ್‌ಗಳ ಮೇಲೆ ಒತ್ತಡ ಹೆಚ್ಚಾಯಿತು. ಆಂಧ್ರ ಪ್ರದೇಶದಿಂದಲೂ ಚಿಕಿತ್ಸೆಗಾಗಿ ಬಂದಿದ್ದರಿಂದ ಜನದಟ್ಟಣೆ ಹೆಚ್ಚಿತ್ತು.

‘ಪ್ರತಿಭಟನೆ ಹಿನ್ನೆಲೆಯಲ್ಲಿ ನಮ್ಮೆಲ್ಲ ವೈದ್ಯರನ್ನೂ ತಪ್ಪದೇ ಹಾಜರಾಗಲು ಸೂಚಿಸಲಾಯಿತು. ಒಪಿಡಿಗಳಲ್ಲಿ ಸೇವೆ ನಿಲ್ಲದಂತೆ ನೋಡಿಕೊಂಡೆವು. ಪರಿಸ್ಥಿತಿ ಹೀಗೆಯೇ  ಮುಂದುವರಿದರೆ ಕಷ್ಟವಾಗಲಿದೆ’ ಎಂದು ವಿಮ್ಸ್‌ನ ನಿರ್ದೇಶಕ ಡಾ ಗಂಗಾಧರ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.