ADVERTISEMENT

ಹುಬ್ಬಳ್ಳಿ: ದಾನ ಮಾಡಿ ಈದ್‌ ಮಿಲಾದ್ ಆಚರಣೆ

ಕೋವಿಡ್‌ ಕಾರಣಕ್ಕೆ ಮನೆಯಲ್ಲೇ ಹಬ್ಬ, ಪಾಯಸ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 15:54 IST
Last Updated 30 ಅಕ್ಟೋಬರ್ 2020, 15:54 IST
ಹಳೇಹುಬ್ಬಳ್ಳಿಯ ಸೈಯದ್‌ ಫತೇಶಾ ವಲಿ ದರ್ಗಾದಲ್ಲಿ ಶುಕ್ರವಾರ ಅಂಜುಮನ್ ಇಸ್ಲಾಂ ಸಂಸ್ಥೆ ಪದಾಧಿಕಾರಿಗಳು ಈದ್‌ ಮಿಲಾದ್‌ ಅಂಗವಾಗಿ ಹಣ್ಣುಗಳನ್ನು ಹಂಚಿದರು
ಹಳೇಹುಬ್ಬಳ್ಳಿಯ ಸೈಯದ್‌ ಫತೇಶಾ ವಲಿ ದರ್ಗಾದಲ್ಲಿ ಶುಕ್ರವಾರ ಅಂಜುಮನ್ ಇಸ್ಲಾಂ ಸಂಸ್ಥೆ ಪದಾಧಿಕಾರಿಗಳು ಈದ್‌ ಮಿಲಾದ್‌ ಅಂಗವಾಗಿ ಹಣ್ಣುಗಳನ್ನು ಹಂಚಿದರು   

ಹುಬ್ಬಳ್ಳಿ: ಕೋವಿಡ್‌ ಕಾರಣಕ್ಕೆ ಈ ಬಾರಿಯ ಈದ್ ಮಿಲಾದ್ ಸಡಗರ ಹೊರಗಡೆ ಎಲ್ಲಿಯೂ ಕಂಡುಬರಲಿಲ್ಲ. ಬಹುತೇಕರು ಮನೆಯಲ್ಲಿ ಹಬ್ಬ ಆಚರಿಸಿದರು. ಹಲವರು ದಾನ ಮಾಡಿ ಖುಷಿಪಟ್ಟರು.

ಕೊನೆಯ ಪ್ರವಾದಿ ಮುಹಮ್ಮದ್‌ (ಸ) ಅವರ ಜನ್ಮದಿನವನ್ನು ವಾಣಿಜ್ಯ ನಗರಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅದ್ಧೂರಿ ಮೆರವಣಿಗೆ, ದರ್ಗಾ ಮತ್ತು ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಗುತಿತ್ತು. ಆದರೆ, ಈ ಸಲ ಯಾವ ಸಡಗರವೂ ಕಾಣಲಿಲ್ಲ.

ಹಳೇ ಹುಬ್ಬಳ್ಳಿ, ಶಿರಡಿ ನಗರ ಸೇರಿದಂತೆ ಹಲವು ಬಡಾವಣೆಗಳ ಮಸೀದಿಗಳ ಮುಂದೆ ಮುಸ್ಲಿಂ ಸಮಾಜದ ಪ್ರಮುಖರು ಪಾಯಸದ ವ್ಯವಸ್ಥೆ ಮಾಡಿದ್ದರು. ನಮಾಜ್‌ ಮುಗಿಸಿ ಬಂದವರು ಹಾಗೂ ಬಡಾವಣೆಯ ಸುತ್ತಮುತ್ತಲಿನ ಜನರಿಗೆ ಹಂಚಿದರು.

ADVERTISEMENT

ಅಂಜುಮನ್‌–ಎ–ಇಸ್ಲಾಂ ಸಮಿತಿಯ ಪದಾಧಿಕಾರಿಗಳು ಹಜರತ್‌ ಸೈಯದ್‌ ಫತೇಶಾ ವಲಿ ದರ್ಗಾಕ್ಕೆ ಭೇಟಿ ನೀಡಿ ಬಡವರಿಗೆ ಹಣ್ಣು ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡಿದರು. ದರ್ಗಾದಲ್ಲಿ ಫಾತೇಖಾನಿ(ಓದಿಕೆ) ನಡೆಯಿತು. ಇದಕ್ಕೂ ಮೊದಲು ಗೌಸಿಯಾ ಮದರ್‌ನಿಂದ ಹೊರಟ ಮೆರವಣಿಗೆ ದುರ್ಗದಬೈಲ್ ಸೇರಿದಂತೆ ಅನೇಕ ಓಣಿಗಳಲ್ಲಿ ಸಂಚರಿಸಿತು.

ಅಂಜುಮನ್‌ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯುಸೂಫ್‌ ಸವಣೂರು, ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು, ಪದಾಧಿಕಾರಿಗಳಾದ ಬಶೀರ ಹಳ್ಳೂರ, ಅಬ್ದುಲ್ ಮುನಾಫ್ ದೇವಗಿರಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ ಎಂ.ಎ.ಪಠಾಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಪ್ರಸಾದ ವಿತರಣೆ: ಗೋಪನಕೊಪ್ಪದ ಮಸೂತಿ ಓಣಿಯಲ್ಲಿ ಟಿಪ್ಪು ಸುಲ್ತಾನ್‌ ಯುವ ಸಮಿತಿಯಿಂದ ಸಿಹಿಗಂಜಿ ಪ್ರಸಾದ ಹಂಚಲಾಯಿತು.

ಪ್ರಮುಖರಾದ ಅನ್ವರ್ ಸಾಬ್ ಹಂಚಿನಾಳ, ಬಾಬುಸಾಬ ಮಾಮಾಜಿ, ಅಲ್ಲಾಭಕ್ಷ ಹಂಚಿನಾಳ, ನಬೀಸಾಬ್‌ ನದಾಫ, ಶಾನು ಮಾಮಾಜಿ, ಸದ್ದಾಮ ಕಿರದಿ, ಹೈದರ್ ಸಾಬ್‌, ದಾವಲ ಬಾಯಿ, ಮಕ್ಬುಲ್ ಬಾನಿ ಸೈಯದ್‌ ಕಿರದಿ, ತೌಸಿಫ್‌ಮಾಮಾಜಿ, ಆಸೀಫ್‌ ಮಾಮಾಜಿ, ರೆಹಮಾನ್‌ ನದಾಫ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ದಾನ ಮಾಡಿದ ಮುಖಂಡರು: ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್‌ ಸನದಿ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಕೂಡ ದಾನ ಮಾಡಿ ಖುಷಿ ಪಟ್ಟರು.

‘ನೆರೆಹೊರೆಯವರು ಹಸಿವಿನಿಂದಬಳಲುತ್ತಿರುವಾಗ,ತಮ್ಮಮನೆಯಲ್ಲಿ ಊಟ ಮಾಡಿ ಇನ್ನೊಬ್ಬರ ಸಂಕಷ್ಟಕ್ಕೆ ಆಗದವರು ನಿಜವಾದ ಇಸ್ಲಾಂನಲ್ಲಿ ನಂಬಿಕೆ ಉಳ್ಳವರು ಅಲ್ಲ ಎಂದು ಪ್ರವಾದಿ ಮುಹಮ್ಮದ್‌ (ಸ) ಹೇಳಿದ್ದಾರೆ. ಆದ್ದರಿಂದ ನಮ್ಮ ಕೈಲಾದಷ್ಟು ದಾನ ಮಾಡಿ ಹಬ್ಬ ಆಚರಿಸಿದೆವು’ ಎಂದು ಸನದಿ ತಿಳಿಸಿದರು.

ಅನೇಕ ಮುಸ್ಲಿಮರು ಮನೆಯಲ್ಲಿಯೇ ಹಬ್ಬ ಆಚರಿಸಿ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.