ADVERTISEMENT

ಆಹಾರದ ಕಿಟ್: ಸ್ವೀಕೃತಿ ಕೇಂದ್ರದತ್ತ ಸುಳಿಯದ ದಾನಿಗಳು

ಜನರಿರುವಲ್ಲಿಗೆ ತಾವೇ ತೆರಳಿ ನೆರವು; ಸೋಂಕು ಹರಡುವ ಆತಂಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 11:19 IST
Last Updated 9 ಜೂನ್ 2021, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ದಾನಿಗಳಿಂದ ಆಹಾರದ ಕಿಟ್‌ ಸಂಗ್ರಹಿಸಿ, ಅಗತ್ಯ ಇರುವವರಿಗೆ ವಿತರಿಸಲು ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾಡಳಿತ ಸ್ವೀಕೃತಿ ಕೇಂದ್ರಗಳನ್ನು ತೆರೆದು ವಾರವಾಗಿದ್ದರೂ, ದಾನಿಗಳು ಇವುಗಳತ್ತ ಮುಖ ಮಾಡುತ್ತಿಲ್ಲ.

ಲಾಕ್‌ಡೌನ್‌ನಿಂದ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರಿಗೆ ದಾನಿಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಆದರೆ, ತಾವೇ ಜನರಿರುವಲ್ಲಿ ತೆರಳಿ, ಅಗತ್ಯ ವಸ್ತುಗಳನ್ನು ವಿತರಿಸಿದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಹೆಚ್ಚಿದೆ. ಅದನ್ನು ತಪ್ಪಿಸಲು ಸ್ವೀಕೃತಿ ಕೇಂದ್ರಗಳನ್ನು ತೆರೆಯಲಾಗಿದೆ.

ಕಳೆದ ವರ್ಷ ಜನರಿಗೆ ಸ್ವತಃ ನೆರವು ನೀಡಿದ್ದ ಕೆಲ ದಾನಿಗಳಿಗೆ ಕೋವಿಡ್ ದೃಢಪಟ್ಟಿದ್ದರಿಂದ, ನೆರವು ಪಡೆದಿದ್ದ ಜನರಲ್ಲೂ ಆತಂಕ ಉಂಟಾಗಿತ್ತು. ಕಳೆದ ವರ್ಷವೂ ಸ್ವೀಕೃತಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆಗಲೂ ದಾನಿಗಳಿಂದ ಸ್ಪಂದನೆ ಸಿಕ್ಕಿರಲಿಲ್ಲ. ಈ ಬಾರಿಯೂ ಅದೇ ಸ್ಥಿತಿ ಮುಂದುವರಿದಿದ್ದು, ಕೊರೊನಾ ಆತಂಕದ ನಡುವೆಯೂ ಜನರಿರುವಲ್ಲೇ ತೆರಳಿ, ನೆರವು ನೀಡಲು ಬಹುತೇಕರು ಮುಂದಾಗುತ್ತಿದ್ದಾರೆ.

ADVERTISEMENT

‘ಧಾರವಾಡದ ಮಿನಿವಿಧಾನದೌಧದ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕಚೇರಿಯಲ್ಲಿ ತೆರೆಯಲಾಗಿರುವ ಸ್ವೀಕೃತಿ ಕೇಂದ್ರದಲ್ಲಿ ಈವರೆಗೆ ದಾನಿಗಳು ಕಿಟ್‌ಗಳನ್ನು ನೀಡಿಲ್ಲ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಪಿ. ಸಾವಕಾರ ತಿಳಿಸಿದರು.

‘ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಬಳಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತೆರೆಯಲಾಗಿರುವ ಕೇಂದ್ರಕ್ಕೆ ಸಿದ್ಧಾರೂಢ ಮಠದಿಂದ 1,000 ಹಾಗೂ ರೋಟರಿ ಕ್ಲಬ್‌ನಿಂದ 20 ಕಿಟ್‌ಗಳನ್ನು ನೀಡಲಾಗಿತ್ತು. ದಾನಿಗಳು ಸೂಚಿಸಿದಂತೆ ಆಟೊ ಚಾಲಕರು, ಕಲಾವಿದರು, ಬಡವರಿಗೆ ವಿತರಿಸಲಾಗಿದೆ’ ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಡಿ. ಪಾಟೀಲ ಮಾಹಿತಿ ನೀಡಿದರು.

‘ದಾನಿಗಳು ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು, ಸ್ವೀಕೃತಿ ಕೇಂದ್ರಗಳ ಮೂಲಕ ವಿತರಣೆಗೆ ಮುಂದಾಗಬೇಕು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಪ್ರೀತಿ ಚಂದ್ರಶೇಖರ್‌ ದೊಡ್ಡಮನಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.