ADVERTISEMENT

ಸರ್ಕಾರಿ ಶಾಲೆಗಳಲ್ಲೂ ಹಬ್ಬಿದ ಡೊನೇಷನ್ ಹಾವಳಿ: ಎಐಡಿಎಸ್‌ಒ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 5:15 IST
Last Updated 22 ಅಕ್ಟೋಬರ್ 2022, 5:15 IST

ಧಾರವಾಡ: ‘ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಂದ ಮಾಸಿಕ ₹100 ದೇಣಿಗೆ ಸಂಗ್ರಹಿಸುವ ಸುತ್ತೋಲೆ ಸರ್ಕಾರದ ಕುತಂತ್ರವಾಗಿದೆ’ ಎಂದು ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಬಿಳೂರ ಆರೋಪಿಸಿದ್ದಾರೆ.

‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ಈ ಕುರಿತು ವಿಶೇಷ ವರದಿ ಪ್ರಕಟಗೊಂಡಿದೆ. ಇದೇ ವಿಷಯವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯ ಸರ್ಕಾರವು ಶಿಕ್ಷಣಕ್ಕೆ ಹಣ ಒದಗಿಸುವ ತನ್ನ ಜವಾಬ್ದಾರಿಯಿಂದ ನಿರಾಯಾಸವಾಗಿ ನುಣುಚಿಕೊಂಡಿದೆ. ಶಿಕ್ಷಣಕ್ಕಾಗಿ ಹಣ ಹೊಂದಿಸುವ ಹೊರೆಯನ್ನು ಪೋಷಕರ ಹೆಗಲಿಗೆ ಹೊರಿಸಿದೆ. ಸರ್ಕಾರಿ ಶಾಲೆಗಳಲ್ಲಿ ಡೊನೇಷನ್ ಪಡೆಯುವುದನ್ನು ಸುತ್ತೋಲೆ ಮೂಲಕ ಅಧಿಕೃತಗೊಳಿಸಿದೆ. ಸರ್ಕಾರದ ಈ ನಿರ್ಧಾರ ಅತ್ಯಂತ ಆಘಾತಕಾರಿ ಮತ್ತು ಖಂಡನೀಯ’ ಎಂದಿದ್ದಾರೆ.

‘ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ 50ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 4,500 ಸರ್ಕಾರಿ ಶಾಲೆಗಳಿಗೆ ತಲಾ ಒಬ್ಬರೇ ಶಿಕ್ಷಕರಿದ್ದಾರೆ. ಮನೆ ನಿರ್ವಹಣೆಗಾಗಿ ಬಹಳಷ್ಟು ಮಕ್ಕಳು ಶಾಲೆ ಬಿಟ್ಟು ಕೂಲಿಗೆ ಹೊರಟಿದ್ದಾರೆ. ಇಂಥ ಸಂದರ್ಭದಲ್ಲಿ ಡೊನೇಷನ್ ವಸೂಲಿಯ ಸುತ್ತೋಲೆ ಮೂಲಕ ಇನ್ನಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಸರ್ಕಾರಿ ಶಾಲೆ ನಡೆಯಲು ಸಮುದಾಯದ ಪಾತ್ರ ಅನಿವಾರ್ಯ ಎಂಬುದನ್ನು ಸುತ್ತೋಲೆಯಲ್ಲಿ ಪ್ರತಿಪಾದಿಸಲಾಗಿದೆ. ಹೊಸ ಶಿಕ್ಷಣ ನೀತಿಯು ಪ್ರತಿಪಾದಿಸಿರುವಂತೆ ಕ್ರಮೇಣವಾಗಿ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಪಾಲಕರ ಮೇಲೆ ಹೋರಿಸಲಾಗುತ್ತಿದೆ. ಉನ್ನತ ಶಿಕ್ಷಣವು ಸರ್ಕಾರದ ಜವಾಬ್ದಾರಿಯಾಗಬಾರದು ಎಂದು ಈಗಾಗಲೇ ರಾಜ್ಯದ ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಈಗ ನೂರು ರೂಪಾಯಿ ದೇಣಿಗೆಯಿಂದ ಆರಂಭವಾಗಿ ಮುಂದೆ ಶಾಲಾ ನಿರ್ವಹಣೆಯ ಸಂಪೂರ್ಣ ಹೊಣೆ ಪಾಲಕರದ್ದೇ ಎಂದು ಸರ್ಕಾರ ಹೇಳುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದನ್ನೇ ಬಳಸಿಕೊಂಡು ಸರ್ಕಾರವು ಶಾಲೆಗಳನ್ನು ಮುಚ್ಚಿ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವಷಡ್ಯಂತ್ರ ನಡೆಸಿದೆ. ಇದರ ವಿರುದ್ಧ ಸರ್ಕಾರ ರಾಜ್ಯವ್ಯಾಪಿ ಹೋರಾಟ ಆರಂಭಿಸಬೇಕಿದೆ’ ಎಂದು ಮಹಾಂತೇಶ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.