ADVERTISEMENT

‘ಸೈನಿಕರ ಅವಹೇಳನ ಮಾಡಬೇಡಿ’

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 16:10 IST
Last Updated 26 ಜುಲೈ 2022, 16:10 IST
ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಿರಾಮಯ ಫೌಂಡೇಷನ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಯುವ ಸಾಧಕರನ್ನು ಸನ್ಮಾನಿಸಲಾಯಿತು
ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಿರಾಮಯ ಫೌಂಡೇಷನ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಯುವ ಸಾಧಕರನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ‘ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸದಿದ್ದರೂ ಚಿಂತೆಯಿಲ್ಲ. ಆದರೆ, ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಾರದು. ಎಲ್ಲಿಯವರೆಗೆ ದೇಶದ ಗಡಿ ಬಲಿಷ್ಠವಾಗಿರುತ್ತದೆಯೋ ಅಲ್ಲಿಯವರೆಗೆ ದೇಶಕ್ಕೆ ಯಾವುದೇ ಆತಂಕವಿಲ್ಲ’ ಎಂದು ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಿರಾಮಯ ಫೌಂಡೇಷನ್ ಹಮ್ಮಿಕೊಂಡಿದ್ದ ‘ಕಾರ್ಗಿಲ್ ವಿಜಯ ದಿವಸ್ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ದೇಶ ಅಖಂಡವಾಗಿರಬೇಕೆಂದರೆ ಯೋಧರ ತ್ಯಾಗ ಪ್ರಮುಖ ಪಾತ್ರವಹಿಸುತ್ತದೆ’ ಎಂದರು.

‘ಸಿನೆಮಾದಲ್ಲಿ ಬಳಸುವ ನಟ, ನಟಿಯರ ಹೆಸರನ್ನು ಮಕ್ಕಳಿಗೆ ಇಡುವವರ ಸಂಖ್ಯೆ ಹೆಚ್ಚಾಗಿದೆ. ಆ ಹೆಸರಿಗೆ ಅರ್ಥವೂ ಇರುವುದಿಲ್ಲ. ಪುರಾಣದಲ್ಲಿ ಬರುವವರ ಹೆಸರನ್ನು ಇಟ್ಟು, ನಮ್ಮ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯಬೇಕು’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್‌ಎಸ್‌ಎಸ್‌ ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಯೋಜಕ ರಘುನಂದನ, ‘ಭಾರತವನ್ನು ಕ್ರೈಸ್ತರ ದೇಶವನ್ನಾಗಿ ಮಾಡಲೆಂದೇ ಬ್ರಿಟಿಷರು ಭಾರತಕ್ಕೆ ಬಂದಿದ್ದರು. ಆದರೆ, ಅವರು ವ್ಯಾಪಾರಕ್ಕಾಗಿ ಬಂದಿದ್ದರು ಎಂದು ತಿರುಚಲಾಯಿತು. ಇದಕ್ಕಿಂತ ದೊಡ್ಡ ಅಪಚಾರ ಇನ್ನೊಂದಿಲ್ಲ. ರಾಣಾ ಪ್ರತಾಪ, ಶಿವಾಜಿ ಮಹಾರಾಜರನ್ನು ನಾವು ವೀರ, ಶೂರ ಎಂದಷ್ಟೇ ಕರೆಯುತ್ತೇವೆ. ಅವರು ಸಹ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು’ ಎಂದರು.

‘ಬ್ರಿಟಿಷರಿಂದ ಬಂಧಮುಕ್ತರಾದ ನಂತರ ವಿ.ಡಿ. ಸಾವರ್ಕರ್ ಸಾಮಾಜಿಕ ಕ್ರಾಂತಿಗೆ ಮುಂದಾಗಿ, ರತ್ನಗಿರಿಯಲ್ಲಿದ್ದ ಜಾತಿಭೇದ ತೊಡೆದುಹಾಕಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೈನ್ಯ ಸೇರಲು ಯುವಕರಿಗೆ ಕರೆ ನೀಡಿದರು. ಆಧುನಿಕ ಶಸ್ತ್ರಾಸ್ತ್ರ ಬಳಕೆ ಬಗ್ಗೆ ಯುವಕರಿಗೆ ತಿಳಿಸಲು ಮುಂದಾಗಿದ್ದರು. ತಮ್ಮ ಜೀವಿತಾವಧಿವರೆಗೂ ಅವರು ಸ್ವಾತಂತ್ರ್ಯಕ್ಕಾಗಿಯೇ ಹೋರಾಡಿದ್ದರು’ ಎಂದು ಸಾತ್ಯಕಿ ಸಾವರ್ಕರ್‌ ಹೇಳಿದರು.

ನಿವೃತ್ತ ಸೈನಿಕರಿಗೆ, ಹುತಾತ್ಮರಾದ ಸೈನಿಕರ ಕುಟುಂಬದವರಿಗೆ ಹಾಗೂ ಸೈನಿಕರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಸನ್ಮಾನಿಸಲಾಯಿತು. ನಿರಾಮಯ ಫೌಂಡೇಷನ್ ಉಪಾಧ್ಯಕ್ಷ ಕಲ್ಲಪ್ಪ ಮೊರಬದ ಅಧ್ಯಕ್ಷತೆ ವಹಿಸಿದ್ದರು.

‘ಸತ್ಯ ಪುಟಿದೇಳುತ್ತಿದೆ’

‘ಸ್ವಾತಂತ್ರ್ಯಾನಂತರ ವಿ.ಡಿ. ಸಾವರ್ಕರ್‌, ಸುಭಾಶ್ಚಂದ್ರ ಅವರ ಹೆಸರು ಎಲ್ಲಿಯೂ ಬರಬಾರದೆಂದು ಕುತಂತ್ರಗಳು ನಡೆದವು. ಇದೀಗ ಸತ್ಯ ನಿಧಾನವಾಗಿ ಮೇಲೇಳುತ್ತಿದೆ. ನಿಜವಾದ ಸ್ವರಾಜ್ಯ ಅರ್ಥ ಪಡೆದುಕೊಳ್ಳುತ್ತಿದೆ. ಅವರ ಇತಿಹಾಸ ಪಠ್ಯದಲ್ಲಿ ಇರದಿದ್ದರೂ ಜನರ ಮನಸ್ಸಲ್ಲಾದರೂ ಇರಬೇಕು. ಭಾರತ‌ಮಾತೆ ಕಾಶ್ಮೀರದಲ್ಲಿಯೇ ಇದ್ದಾಳೆ ಎನ್ನುವುದು ಬೇಡ; ಮಾತೃಭಾಷೆ ಮೇಲಿನ ಅಭಿಮಾನ, ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ, ದಾನಗಳಲ್ಲಿಯೇ ಅವಳು ಇದ್ದಾಳೆ’ ಎಂದು ಆರ್‌ಎಸ್‌ಎಸ್‌ ಮುಂಖಂಡ ರಘುನಂದನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.