ADVERTISEMENT

ಉಣಕಲ್, ತೋಳನಕೆರೆಗೆ ಕೊಳಚೆ ಹರಿವು ಇನ್ನೂ ನಿಂತಿಲ್ಲ!

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:56 IST
Last Updated 20 ಜುಲೈ 2019, 14:56 IST
ಹುಬ್ಬಳ್ಳಿಯ ತೋಳನಕೆರೆಯ ಒಡಲನ್ನು ಗಟಾರದ ಕೊಳಚೆ ನೀರು ಸೇರುತ್ತಿರುವುದು  
ಹುಬ್ಬಳ್ಳಿಯ ತೋಳನಕೆರೆಯ ಒಡಲನ್ನು ಗಟಾರದ ಕೊಳಚೆ ನೀರು ಸೇರುತ್ತಿರುವುದು     

ಹುಬ್ಬಳ್ಳಿ: ವಾಣಿಜ್ಯನಗರಿಯ ಪ್ರಮುಖ ಕೆರೆಗಳಾದ ಉಣಕಲ್ ಕೆರೆ ಮತ್ತು ತೋಳನಕೆರೆಯ ಒಡಲಿಗೆ ಗಟಾರದ ಕೊಳಚೆ ನೀರಿನ ಹರಿವು ಇನ್ನೂ ನಿಂತಿಲ್ಲ.

ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜುಲೈ 2ರಂದು ವಿಶೇಷ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಶಾಸಕ ಜಗದೀಶ ಶೆಟ್ಟರ್ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿಯಾಗುತ್ತಿರುವ ತೋಳನಕೆರೆಗೆ ಭೇಟಿ ನೀಡಿ, ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಅದೇ ರೀತಿ, ಉಣಕಲ್ ಕೆರೆಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಇದಾಗಿ 18 ದಿನಗಳಾದರೂ ಕೆರೆಗೆ ಕೊಳೆ ನೀರಿನ ಹರಿವಿಗೆ ಬ್ರೇಕ್ ಬಿದ್ದಿಲ್ಲ. ಕೆರೆಗಳು ನಿತ್ಯ ಮಲೀನಗೊಳ್ಳುತ್ತಿರುವುದನ್ನು ನೋಡಿಯೂ ನೋಡದಂತೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ADVERTISEMENT

‘ಎರಡೂ ಕೆರೆಗಳಿಗೆ ಗಟಾರದ ನೀರು ಹರಿಯುತ್ತಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲದೆ, ಕೆರೆಗಳ ವ್ಯಾಪ್ತಿಯ ವಲಯ ಅಧಿಕಾರಿಗಳಿಗೆ ಕೊಳಚೆ ನೀರಿನ ಹರಿವು ತಡೆಯುವಂತೆ ಸೂಚಿಸಿದ್ದೆ. ಆದರೆ, ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ’ ಎಂದು ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಿಜಯಕುಮಾರ್ ಅಸಹಾಯಕತೆ ವ್ಯಕ್ತಪಡಿಸಿದರು.

ಹೋರಾಟದ ಎಚ್ಚರಿಕೆ:

‘ಹುಬ್ಬಳ್ಳಿಯಲ್ಲಿ ಸದ್ಯ ಉಳಿದುಕೊಂಡಿರುವುದು ಉಣಕಲ್ ಮತ್ತು ತೋಳಕನೆರೆಗಳಷ್ಟೇ. ಇದೀಗ ಅವುಗಳನ್ನು ಸಂರಕ್ಷಿಸುವುದಕ್ಕೂ ನಮ್ಮ ಜನಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಸ್ಥಳೀಯರೆಲ್ಲರೂ ಸೇರಿ ಕೆರೆ ಉಳಿಸಿ ಹೋರಾಟ ಆರಂಭಿಸಲಾಗುವುದು’ ಎಂದು ಶ್ರೇಯಾ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಿಂಗರಾಜ ಧಾರವಾಡಶೆಟ್ಟರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.