ADVERTISEMENT

ಮಿನಿ ವಿಧಾನಸೌಧದ ಮೇಲೆ ಎಣ್ಣೆ ಪಾರ್ಟಿ

ಶಾಸಕರ ಕಚೇರಿ ಮೇಲಿನ ಮಹಡಿಯಲ್ಲಿ ಇಸ್ಪೀಟ್‌ ಎಲೆ, ಖಾಲಿ ಬಾಟಲಿಗಳು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 10:21 IST
Last Updated 30 ನವೆಂಬರ್ 2019, 10:21 IST
ಹುಬ್ಬಳ್ಳಿ ಮಿನಿ ವಿಧಾನಸೌಧದ ನಾಲ್ಕನೇ ಅಂತಸ್ತಿನಲ್ಲಿರುವ ಸ್ಟೋರ್‌ ರೂಮ್‌ನಲ್ಲಿ ಬಿಯರ್‌ ಬಾಟಲ್‌ಗಳು
ಹುಬ್ಬಳ್ಳಿ ಮಿನಿ ವಿಧಾನಸೌಧದ ನಾಲ್ಕನೇ ಅಂತಸ್ತಿನಲ್ಲಿರುವ ಸ್ಟೋರ್‌ ರೂಮ್‌ನಲ್ಲಿ ಬಿಯರ್‌ ಬಾಟಲ್‌ಗಳು   

ಹುಬ್ಬಳ್ಳಿ: ಶಾಸಕರ, ತಹಶೀಲ್ದಾರ್‌, ಗ್ರಾಮೀಣ ಪೊಲೀಸ್‌ ಠಾಣೆ ಸೇರಿದಂತೆ ಪ್ರಮುಖ ಕಚೇರಿಗಳನ್ನು ಹೊಂದಿರುವ ನಗರದ ಮಿನಿ ವಿಧಾನಸೌಧದ ನಾಲ್ಕನೇ ಅಂತಸ್ತಿನಲ್ಲಿರುವ ಚಿಕ್ಕ ಕೊಠಡಿ ರಾತ್ರಿ ವೇಳೆ ಮೋಜು–ಮಸ್ತಿಯ ತಾಣವಾಗಿದೆಯೇ ಎಂಬ ಅನುಮಾನ ಅಲ್ಲಿನ ವಸ್ತುಗಳನ್ನು ನೋಡಿದಾಗ ಏಳುತ್ತದೆ.

ನಾಲ್ಕನೇ ಅಂತಸ್ತಿನ ಮೆಟ್ಟಿಲು ಹತ್ತುತ್ತಿದ್ದಂತೆ ಚೀಲದಲ್ಲಿ ಬಚ್ಚಿಟ್ಟಿರುವ ಖಾಲಿ ವಿಸ್ಕಿ ಬಾಟಲ್‌ ಕಾಣುತ್ತವೆ. ಸುತ್ತ ಕಣ್ಣಾಡಿಸಿದರೆ ಇಸ್ಪಿಟ್‌ ಎಲೆಗಳು, ಎದುರಿಗೆ ಇರುವ ಚಿಕ್ಕ ಕೊಠಡಿ ಒಳ ಹೊಕ್ಕರೆ, ಬಿಯರ್‌, ಗುಟ್ಕಾ ಪಾಕೆಟ್‌ಗಳು ಗೋಚರಿಸುತ್ತವೆ.

ಮಿನಿ ವಿಧಾನಸೌಧದಲ್ಲಿರುವ ವಿವಿಧ ಕಚೇರಿಗಳಲ್ಲಿನ ಹಾಳಾದ ಸಾಮಗ್ರಿಗಳನ್ನು ಹಾಕಲು ಕಟ್ಟಡ ಮೇಲ್ಭಾಗದಲ್ಲಿ ಒಂದು ಕೊಠಡಿ ಇದೆ. ಹಾಳಾದ ಕಂಪ್ಯೂಟರ್‌ ಸಾಮಗ್ರಿಗಳು, ಇಲಾಖೆಗಳ ಕೆಲವು ಕಾಗದ ಪತ್ರಗಳ ರಾಶಿ ಅಲ್ಲಿ ಬಿದ್ದಿವೆ. ಅಲ್ಲದೇ, ಕೆಲವು ಪೊಲೀಸ್‌ ಸಿಬ್ಬಂದಿಯ ಬಟ್ಟೆ, ಕಾಗದ ಪತ್ರಗಳಿರುವ ಪೆಟ್ಟಿಗೆಗಳು ಸಹ ಇವೆ.

ADVERTISEMENT

ಚಿಕ್ಕ ಕೊಠಡಿಯ ತುಂಬೆಲ್ಲ ಇಸ್ಪಿಟ್‌ ಎಲೆಗಳು ಬಿದ್ದಿವೆ. ಗುಟ್ಕಾ, ತಂಬಾಕಿನ ಖಾಲಿ ಪ್ಯಾಕೆಟ್‌ಗಳು ಎಲ್ಲೆಂದರಲ್ಲಿ ಎಸೆಯಲಾಗಿದೆ. ಮದ್ಯ ಕುಡಿದು ಮೋಜು ಮಸ್ತಿ ಮಾಡಿದ್ದಾರೆ ಎನ್ನಲು ಅಲ್ಲಿದ್ದ ಬಿಯರ್‌ ಬಾಟಲ್‌ಗಳು ಸಾಕ್ಷಿಯಾಗಿವೆ.

ಮೂರನೇ ಅಂತಸ್ತಿನ ಖಾಲಿ ಜಾಗದಲ್ಲಿಯೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿವೆ. ಮೂಲೆಯೊಂದರಲ್ಲಿ ನಿಂತ ನೀರಿಗೆ ಕಸ ತಂದು ಹಾಕಿರುವುದರಿಂದ, ವಾತಾವರಣ ಹದಗೆಟ್ಟು ಹೋಗಿದೆ. ಮುಖ್ಯವಾಗಿ ಅಧಿಕಾರಿಗಳು ಸಿಬ್ಬಂದಿ ಜೊತೆಗೆ ನಡೆಸಿದ ಸಭೆಗಳಲ್ಲಿ ಟೀ, ಕಾಫಿ ಕುಡಿದ ಪ್ಲಾಸ್ಟಿಕ್‌ ಲೋಟಗಳು ಹಾಗೂ ಬಾಟಲಿಗಳು ರಾಶಿ ಬಿದ್ದಿವೆ. ಅವುಗಳ ನಡುವೆ, ಸಾರಾಯಿ ಪ್ಯಾಕೆಟ್‌ಗಳು ಸಹ ಕಂಡು ಬರುತ್ತವೆ.

ಅನಾಥವಾದ ಶಾಸಕರ ಕಚೇರಿಗಳು: ಮೂರನೇ ಅಂತಸ್ತಿನಲ್ಲಿರುವ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರ ಕಚೇರಿಗಳಿವೆ. ನಗರದಲ್ಲಿಯೇ ಅವರಿಗೆ ಮನೆಗಳಿರುವುದರಿಂದ ಈ ಕಚೇರಿಗಳಿಗೆ ಅವರು ಅಪರೂಪಕ್ಕೆ ಎಂಬಂತೆ ಭೇಟಿ ನೀಡುತ್ತಾರೆ. ಹೀಗಾಗಿ, ಅತ್ತ ಯಾರೂ ಲಕ್ಷ್ಯ ವಹಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.