ADVERTISEMENT

ಹುಬ್ಬಳ್ಳಿ | ಮಾದಕ ವಸ್ತುಗಳ ಬಳಕೆ: ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 14:17 IST
Last Updated 20 ಜೂನ್ 2023, 14:17 IST
   

ಹುಬ್ಬಳ್ಳಿ: ನೈರುತ್ಯ ರೈಲ್ವೆ ಕಾರ್ಮಿಕರ ಒಕ್ಕೂಟದ ಸದಸ್ಯರು ಮತ್ತು ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕದ ಅಧಿಕಾರಿಗಳು ಸೋಮವಾರ ನಗರದ ವಿವಿಧ ಶಾಲಾ–ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.

ಸಂತೋಷನಗರದ ಜೆ.ಕೆ. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಕೇಶ್ವಾಪುರದ ಎಸ್‌ಬಿಐ ಪ್ರಾಥಮಿಕ ಶಾಲೆ ಮತ್ತು ಕಾನ್ವೆಂಟ್‌ ಸ್ಕೂಲ್‌, ಹಳೇಬಸ್‌ ನಿಲ್ದಾಣದ ಹಿಂಭಾಗದಲ್ಲಿನ ಬಾಸೆಲ್‌ ಮಿಸೆಲ್‌ ಸ್ಕೂಲ್‌ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದರು. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಬಗೆಬಗೆಯ ಚಿತ್ರ ಬಿಡಿಸಿದ್ದರು. ಸಾಮಾಜಿಕ ಸಂದೇಶ ಸಾರುವ ಚಿತ್ರ ಬಿಡಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆಯ್ದ ಚಿತ್ರಗಳನ್ನು ಆಯ್ಕೆ ಮಾಡಿ, ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರದರ್ಶಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಕೇಶ್ವಾಪುರ ಕಾನ್ವೆಂಟ್‌ ಸ್ಕೂಲ್‌ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಎಸಿಪಿ ಬಲ್ಲಪ್ಪ ನಂದಗಾವಿ, ‘ಮಾದಕ ವ್ಯಸನಿಗಳು ಸಮಾಜಕ್ಕೆ ಕಂಟಕವಿದ್ದಂತೆ. ಒಂದು ಬಾರಿ ಅದನ್ನು ಸೇವಿಸಿದರೆ ವ್ಯಸನಿಗಳಾಗಿ ವೈಯಕ್ತಿಕ ಬದುಕನ್ನು ಹಾಳು ಮಾಡಿಕೊಳ್ಳುವುದಲ್ಲದೆ, ಕುಟುಂಬ ಮತ್ತು ಸಮಾಜಕ್ಕೂ ಬೇಡದವರಾಗುತ್ತಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳು ಮಾಡಿಕೊಂಡು ಇದ್ದೂ ಇಲ್ಲದ ಹಾಗೆ ಬದುಕಬೇಕಾಗುತ್ತದೆ. ಮಾದಕ ವಸ್ತುಗಳ ಪ್ರಕರಣದಲ್ಲಿ ಸಿಲುಕಿದರೆ ಜಾಮೀನು ಸಹ ದೊರೆಯುವುದಿಲ್ಲ’ ಎಂದರು.

ADVERTISEMENT

‘ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಾಟ ಕಾನೂನು ಪ್ರಕಾರ ಅಪರಾಧ. ಯುವ ಸಮುದಾಯ ಇಂತಹ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ಪ್ರಜ್ಞಾವಂತ ಯುವಕರು ಹಾಗೂ ವಿದ್ಯಾರ್ಥಿಗಳು ಮುಂದಾಗಬೇಕಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಶಾಲಾ ಆವರಣದಲ್ಲಿ ಗಾಂಜಾ ಸೇವನೆ, ಮಾದಕ ವಸ್ತುಗಳ ಬಳಕೆ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಅಥವಾ ಶಾಲಾ ಆಡಳಿತ ಮಂಡಳಿ, ಶಿಕ್ಷಕರಿಗೆ ತಿಳಿಸಬೇಕು. ಅಪರಾಧ ಕೃತ್ಯಗಳ ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸರು ತಕ್ಷಣ ಸ್ಥಳಕ್ಕೆ ಬರುತ್ತಾರೆ’ ಎಂದು ಮಾಹಿತಿ ನೀಡಿದರು.

ಕೇಶ್ವಾಪುರ ಠಾಣೆ ಇನ್‌ಸ್ಪೆಕ್ಟರ್‌ ಯು.ಎಚ್‌. ಸಾತೇನಹಳ್ಳಿ, ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್‌. ಹೂಗಾರ, ರೈಲ್ವೆ ಕಾರ್ಮಿಕ ಒಕ್ಕೂಟದ ಅರುಣ, ಅಶೋಕಕುಮಾರ್‌ ವಿ., ಎ.ಎಂ. ಡಿಕ್ರೂಜ್‌, ಸಾಮ್ಯುವಲ್‌ ಪ್ರಕಾಶ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.