
ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ಕಾರ್ಯಕ್ಕೆ ಶೇಂಗಾ ಸಿಪ್ಪೆಗಳನ್ನು ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಅಂತ್ಯಕ್ರಿಯೆ ತ್ವರಿತವಾಗಿ ನಡೆಯಲಿದ್ದು, ಹೊಗೆ ಪ್ರಮಾಣವೂ ಕಡಿಮೆ. ಮಾರ್ಚ್‌ನಿಂದ ಈ ಕ್ರಮ ಜಾರಿಗೆ ಬಂದಿದ್ದು, ಇದುವರೆವಿಗೂ 60 ಟನ್ ಶೇಂಗಾ ಸಿಪ್ಪೆ ಬಳಕೆಯಾಗಿದೆ.
ನಿತ್ಯ ಸರಾಸರಿ ಐದು ಅಂತ್ಯಕ್ರಿಯೆಗಳು ನಡೆಯಲಿವೆ. ಸಾಮಾನ್ಯವಾಗಿ ಪ್ರತಿ ಅಂತ್ಯಕ್ರಿಯೆಗೆ ಸರಾಸರಿ 250 ಕೆ.ಜಿಯಿಂದ 350 ಕೆ.ಜಿವರೆಗೆ ಸಿಪ್ಪೆ ಬಳಕೆ ಆಗುತ್ತದೆ.
‘ಸ್ನೇಹಿತ ಸುಧಾಕರ ಅವರು ಚಿತ್ರದುರ್ಗದಲ್ಲಿ ಶೇಂಗಾಎಣ್ಣೆ ತಯಾರಿಸುವ ಕಾರ್ಖಾನೆ ತೆರೆದಿದ್ದು, ಸಂಸ್ಕರಣೆ ಬಳಿಕ ವಾರ್ಷಿಕ ನೂರಾರು ಟನ್ ಸಿಪ್ಪೆ ಹಾಳಾಗುತಿತ್ತು. ಅದನ್ನು ಶವಗಳ ಅಂತ್ಯಕ್ರಿಯೆಗೆ ಬಳಸಿದರೆ ಹೇಗೆ ಎಂಬ ಚಿಂತನೆ ಮೂಡಿ, ಕಾರ್ಯರೂಪಕ್ಕೆ ತರಲಾಯಿತು. ಅಲ್ಲಿಂದ ಇಲ್ಲಿಗೆ ತರುವವರೆಗೆ ಸಾರಿಗೆ ವೆಚ್ಚ ಸೇರಿ ಕೆ.ಜಿ ಶೇಂಗಾ ಸಿಪ್ಪೆಗೆ ₹11 ವೆಚ್ಚವಾಗುತ್ತದೆ. ಈವರೆಗೆ 4 ಬಾರಿ ತಲಾ 16 ಟನ್‌ನಂತೆ ಶೇಂಗಾ ಸಿಪ್ಪೆ ಖರೀದಿಸಲಾಗಿದೆ’ ಎಂದು ಮುಕ್ತಿಧಾಮ ಚಾರಿಟೆಬಲ್‌ನ ಸದಸ್ಯ ಭವರಲಾಲ್ ಜೈನ್ ತಿಳಿಸಿದರು.
‘ಹಿಂದೆ ಅಂತ್ಯಕ್ರಿಯೆಗೆ ಕಟ್ಟಿಗೆ ಬಳಕೆ ಆಗುತಿತ್ತು. ತೇವಾಂಶದ ಕಾರಣ ಮಳೆಗಾಲದಲ್ಲಿ ದಹನ ಕಾರ್ಯ ವಿಳಂಬ ಆಗುತ್ತಿತ್ತು. ಜೊತೆಗೆ, ಹೊಗೆಯು ಹೆಚ್ಚಾಗುತಿತ್ತು. ಜನವಸತಿ ನಡುವೆಯೇ ಮುಕ್ತಿಧಾಮ ಇದ್ದು, ಆಸುಪಾಸಿನ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದರು. ಜೊತೆಗೆ, ಬೇರೆ ಸಮಸ್ಯೆಗಳಿದ್ದವು. ಶೇಂಗಾ ಸಿಪ್ಪೆಗಳ ಬಳಕೆಯಿಂದ ವಾತಾವರಣ ಸೇರುವ ಹೊಗೆ ಪ್ರಮಾಣವು ತಗ್ಗಿದೆ’ ಎಂದು ಹೇಳಿದರು.
ಮಾದರಿ ಮುಕ್ತಿಧಾಮ: ‘ಒಂದು ಎಕರೆ ಪ್ರದೇಶದಲ್ಲಿ ಮುಕ್ತಿಧಾಮ ಇದೆ. ಮಕ್ಕಳು ಒಳಗೊಂಡು ಎಲ್ಲರೂ ಇಲ್ಲಿ ನಿರ್ಭೀತಿಯಿಂದ ಓಡಾಡುತ್ತಾರೆ. ಮರ–ಗಿಡಗಳ ನೆರಳಿದೆ. 200 ಮಂದಿ ಕೂರಬಹುದಾದ ವಿಶಾಲ ಪ್ರಾಂಗಣ, ಮೂಲಸೌಲಭ್ಯಗಳನ್ನು ಹೊಂದಿದೆ’ ಎಂದು ಮುಕ್ತಿಧಾಮದ ನಿರ್ವಾಹಕ ಸಿಬ್ಬಂದಿ ಗಣೇಶ ಹೇಳಿದರು.
ಕಟ್ಟಿಗೆ ಬಳಸಿದರೆ ಅಂತ್ಯಕ್ರಿಯೆಗೆ 6 ತಾಸು ಬೇಕು. ಶೇಂಗಾ ಸಿಪ್ಪೆ ಬಳಕೆಯಿಂದ 3 ಗಂಟೆಯಲ್ಲಿ ಮುಗಿಯುತ್ತದೆ. 20 ಟನ್‌ಗೂ ಹೆಚ್ಚು ಸಿಪ್ಪೆ ಸಂಗ್ರಹದ ಗೋದಾಮು ಇಲ್ಲಿದೆ.– ಭವರಲಾಲ್ ಜೈನ್, ಸದಸ್ಯ ಮುಕ್ತಿಧಾಮ ಚಾರಿಟೆಬಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.