ಧಾರವಾಡ: ‘ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಜನತಾ ಶಿಕ್ಷಣ ಸಮಿತಿ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಉತ್ತರ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು’ ಎಂದು ಜೆಎಸ್‍ಎಸ್ ಕಾರ್ಯದರ್ಶಿ ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‍ಎಸ್ ಕಾಲೇಜಿನಲ್ಲಿ ಈಚೆಗೆ ನಡೆದ ಜೆಎಸ್‍ಎಸ್ ನೂತನ ಆಡಳಿತ ಮಂಡಳಿಯ 53ನೇ ವರ್ಷದ ಪಾದಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘1973ರಲ್ಲಿ ಈ ಜನತಾ ಶಿಕ್ಷಣ ಸಮಿತಿಯನ್ನು ವಹಿಸಿಕೊಂಡಾಗ ಆರ್ಥಿಕ ಸಂಕಷ್ಟದಲ್ಲಿತ್ತು. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಿದರು. ಪ್ರೊ. ನ.ವಜ್ರಕುಮಾರ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಿ ಈ ಸಂಸ್ಥೆಯ ಬಲವರ್ಧನೆಯ ಕಾರ್ಯ ಪ್ರಾರಂಭಿಸಿದರು’ ಎಂದರು.
‘ಸ್ವಾತಂತ್ರ್ಯ ಹೋರಾಟಗಾರ ಹುಕ್ಕೇರಿಕರ್ ರಾಮರಾಯರಿಂದ ಸ್ಥಾಪಿತವಾದ ಸಂಸ್ಥೆ, ನೂತನ ಆಡಳಿತ ಮಂಡಳಿ ವಹಿಸಿಕೊಂಡು ಇದೀಗ 53ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದೆ. ಹೆಗ್ಗಡೆ ಅವರಿಗೆ ಧರ್ಮಸ್ಥಳ ಧರ್ಮಭೂಮಿಯಾದರೆ, ಧಾರವಾಡ ಕರ್ಮಭೂಮಿ ಆಗಿದೆ’ ಎಂದು ಹೇಳಿದರು.
‘ಜೆಎಸ್‍ಎಸ್ ಸಂಸ್ಥೆಯ ಅಡಿಯಲ್ಲಿ ಪ್ರಸ್ತುತ 25 ಸಂಸ್ಥೆಗಳಿವೆ. 22 ಸಾವಿರ ವಿದ್ಯಾರ್ಥಿಗಳು, 1,300 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡಕ್ಕೆ ‘ವಿದ್ಯಾಕಾಶಿ’ ಹೆಸರು ಬರಲು ಹೆಗ್ಗಡೆ ಅವರ ಕೊಡುಗೆ ಕೂಡ ಇದೆ’ ಎಂದರು.
ಆಡಳಿತ ಮಂಡಳಿಯ ಸದಸ್ಯ ಶ್ರೀಕಾಂತ ಕೆಮ್ತೂರ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಉಪಾದ್ಯೆ, ಸೂರಜ್ ಜೈನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.