
ಹುಬ್ಬಳ್ಳಿಯ ಗಣೇಶಪೇಟೆಯಲ್ಲಿನ ಮೊಟ್ಟೆ ಮಾರಾಟ ಸೆಂಟರ್‌ನಲ್ಲಿ ಮಾರಾಟಕ್ಕೆ ಇಟ್ಟಿರುವ ಮೊಟ್ಟೆ
ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ: ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಕೆಲ ತಿಂಗಳ ಹಿಂದೆ ಸಗಟು ದರದಲ್ಲಿ ₹5ಕ್ಕೆ ಮಾರಾಟವಾಗುತ್ತಿದ್ದ ಒಂದು ಮೊಟ್ಟೆಯ ದರ ಇದೀಗ ಏಕಾಏಕಿ ₹7ಕ್ಕೆ ಏರಿಕೆ ಆಗಿದ್ದು, ಖರೀದಿದಾರನಿಗೆ ಹೊರೆಯಾಗಿದೆ.
ಚಳಿಗಾಲದ ತಂಪು ವಾತಾವರಣದಲ್ಲಿ ದೇಹವನ್ನು ತುಸು ಬೆಚ್ಚಗಿಟ್ಟುಕೊಳ್ಳಲು ಬಹುತೇಕರು ಮೊಟ್ಟೆಯ ಸೇವನೆ ಇಷ್ಟುಪಡುತ್ತಾರೆ. ಇದರಿಂದಾಗಿ ಸಹಜವಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚಳವಾಗಿ, ಬೆಲೆಯಲ್ಲಿಯೂ ಏರಿಕೆ
ಕಂಡಿದೆ.
‘ಚಳಿಗಾಲದ ಅವಧಿಯಲ್ಲಿ ಮೊಟ್ಟೆಯ ಬೆಲೆ ಏರಿಕೆ ಸಹಜ. ಆದರೆ, ಈ ಬಾರಿ ಸಗಟು ವ್ಯಾಪಾರದಲ್ಲಿಯೇ ಒಂದು ಮೊಟ್ಟೆಯ ಬೆಲೆಯು ದಿಢೀರನೆ ₹2 ವರೆಗೆ ಏರಿಕೆಯಾಗಿದ್ದು, ಗ್ರಾಹಕನಿಗೆ ಹೊರೆಯಾಗಿದೆ’ ಎನ್ನುವುದು ಮೊಟ್ಟೆ ಪ್ರಿಯರ ಅಳಲು.
‘ಹುಬ್ಭಳ್ಳಿಯಲ್ಲಿ 4, ಧಾರವಾಡದಲ್ಲಿ 2 ಮೊಟ್ಟೆ ಇಡುವ ಕೋಳಿ ಫಾರಂಗಳಿವೆ. ಇವುಗಳಲ್ಲಿ ಸಾಕಿರುವ 8 ಲಕ್ಷಕ್ಕೂ ಅಧಿಕ ಕೋಳಿಗಳಿಂದ ನಿತ್ಯ 12 ಲಕ್ಷಕ್ಕೂ ಹೆಚ್ಚು ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಈ ಮೊಟ್ಟೆಗಳು ಜಿಲ್ಲೆಯ ಜನಸಂಖ್ಯೆಗೆ ಸಾಲುವುದಿಲ್ಲ’ ಎನ್ನುತ್ತಾರೆ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಎಸ್.ವಿ.ಸಂತಿ.
‘ಜಿಲ್ಲೆಯಲ್ಲಿ ಮೊಟ್ಟೆ ಇಡುವ ಕೋಳಿಗಳ ಫಾರಂ ಸಂಖ್ಯೆ ಕಡಿಮೆ ಇರುವ ಕಾರಣ, ಅಗತ್ಯಕ್ಕೆ ತಕ್ಕಂತೆ ಮೊಟ್ಟೆಗಳ ಪೂರೈಕೆಯಾಗುತ್ತಿಲ್ಲ. ಸಾರ್ವಜನಿಕರಿಗೆ ಹಾಗೂ ಇಲ್ಲಿನ ಹೋಟೆಲ್‌ನವರಿಗೆ ಮತ್ತು ಬೀದಿಬದಿ ಎಗ್‌ರೈಸ್ ಮಾರಾಟ ಮಾಡುವವರಿಗೆ ಹೆಚ್ಚು ಮೊಟ್ಟೆಗಳ ಅಗತ್ಯವಿದೆ. ಹೀಗಾಗಿ ಇಲ್ಲಿನ ಸಗಟು ವ್ಯಾಪಾರಿಗಳು ಹೆಚ್ಚಾಗಿ ಹೊರಗಡೆಯಿಂದಲೇ ಮೊಟ್ಟೆ ಖರೀದಿಸಿ, ಇಲ್ಲಿ ಮಾರಾಟ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅವರು.
‘ಮೊಟ್ಟೆ ದರವು ನಿತ್ಯ ಬದಲಾವಣೆಯಾಗುತ್ತಲೇ ಇರುತ್ತದೆ. ಹೊಸಪೇಟೆ ವಲಯದ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ನಿತ್ಯ ನಿಗದಿ ಪಡಿಸುವ ದರದ ಆಧಾರದ ಮೇಲೆ ಮೊಟ್ಟೆ ಮಾರಾಟ ಮಾಡಲಾಗುತ್ತಿದೆ. ಚಳಿಗಾಲ ಮುಗಿಯುವ ತನಕವೂ ದರದಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ’ ಎನ್ನುತ್ತಾರೆ ಎಸ್.ವಿ.ಸಂತಿ.
ಜಿಲ್ಲೆಯಲ್ಲಿ ಉತ್ಪಾದನೆ ಆಗುವ ಮೊಟ್ಟೆ ಸಾಲದಿರುವುದರಿಂದ ಕೊಪ್ಪಳ, ಗದಗ ಹಾಗೂ ಹೊಸಪೇಟೆಯಿಂದಲೂ ಸಗಟು ವ್ಯಾಪಾರಿಗಳು ಮೊಟ್ಟೆಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆಎಸ್.ವಿ.ಸಂತಿ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
ಬೇಡಿಕೆ ಹೆಚ್ಚಳ...
‘ಎರಡು ತಿಂಗಳ ಹಿಂದೆ ನಿತ್ಯ 2 ರಿಂದ 3ಸಾವಿರ ಮೊಟ್ಟೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ನವೆಂಬರ್ ಆರಂಭದಿಂದ ಚಳಿ ಆರಂಭವಾಗಿರುವ ಕಾರಣ, ಇದೀಗ ನಿತ್ಯ 5ರಿಂದ 6 ಸಾವಿರ ಮೊಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ. ರಸ್ತೆ ಬದಿಯ ಗಾಡಿ ಹೋಟೆಲ್‌ಗಳಲ್ಲಿ ಎಗ್ ರೈಸ್ ಮಾಡುವವರು ಹೆಚ್ಚು ಮೊಟ್ಟೆಗಳನ್ನು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಗಣೇಶಪೇಟೆಯ ಮೊಟ್ಟೆಯ ಸಗಟು ವ್ಯಾಪಾರಿ ಆಸೀಫ್ ಅಲಿ ಹುನುಗುಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.