ADVERTISEMENT

ಭ್ರಷ್ಟಾಚಾರ ಆರೋಪದ ಹಿಂದೆ ಚುನಾವಣಾ ಗಿಮಿಕ್: ಮಹೇಶ ಟೆಂಗಿನಕಾಯಿ

ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 12:45 IST
Last Updated 24 ಜನವರಿ 2023, 12:45 IST
ಮಹೇಶ ಟೆಂಗಿನಕಾಯಿ
ಮಹೇಶ ಟೆಂಗಿನಕಾಯಿ   

ಹುಬ್ಬಳ್ಳಿ: ‘ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್, ಸ್ವತಃ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. ವಿನಾ ಕಾರಣ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಇದೆಲ್ಲಾ ಚುನಾವಣಾ ಗಿಮಿಕ್ ಆಗಿದೆ’ ಎಂದು ಬಿಜೆಪಿ‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ವ್ಯಂಗ್ಯವಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ, ಯಾವುದೇ ಪುರಾವೆ ಕೊಡದೆ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ ಸರ್ಕಾರದ ವಿರುದ್ಧ ಶೇ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಜೈಲಿಗೆ ಸಹ ಹೋಗಿ ಬಂದಿದ್ದಾರೆ’ ಎಂದರು.

‘ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ವಿರುದ್ಧದ ಭ್ರಷ್ಟಾಚಾರ ಆರೋಪದಲ್ಲೂ ಹುರುಳಿಲ್ಲ. ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳನ್ನು ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ. ಭ್ರಷ್ಟಾಚಾರದ ಆರೋಪ ಮಾಡುವ ಬದಲು, ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಕೊಟ್ಟರೆ, ಅವರು ತನಿಖೆ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ನೀಡದಿದ್ದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಮೂರು ತಿಂಗಳಲ್ಲಿ ಅವರು ನಿವೃತ್ತಿ ತೆಗೆದುಕೊಳ್ಳುವ ಸ್ಥಿತಿ ಬರಲಿದೆ. ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿರುವ ಅವರನ್ನು ಜನ ಈ ಸಲ ಮನೆಗೆ ಕಳಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷ ಸೂಚಿಸಿದ ಕಡೆ ಸ್ಪರ್ಧೆ: ‘ಪಕ್ಷ ನನಗೆ ಯಾವ ಕ್ಷೇತ್ರಕ್ಕೆ ಹೋಗು ಎನ್ನುತ್ತದೊ ಅಲ್ಲಿಗೆ ಹೋಗುವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ನಮ್ಮ ಸರ್ವೋಚ್ಚ ನಾಯಕರು. ನಮ್ಮ ಗುರುಗಳು. ಅವರು ಇನ್ನೂ ಹತ್ತು ಸಲ ಚುನಾವಣೆಗೆ ನಿಂತರೂ ಗೆಲ್ಲಿಸುತ್ತವೆ. ಅಭಿವೃದ್ದಿ ವಿಷಯದಲ್ಲಿ ಗುಜರಾತ್ ಮಾದರಿ ಬದಲು ಕರ್ನಾಟಕ ಮಾದರಿ ನಿರ್ಮಾಣಕ್ಕೆ ನಾವು ಪ್ರಯತ್ನಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ ಹಾಗೂ ಇತರರು ಇದ್ದರು.

ಜ. 27ಕ್ಕೆ ಅಮಿತ್ ಶಾ ಹುಬ್ಬಳ್ಳಿಗೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜ. 27ಕ್ಕೆ ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಡೆನಿಸನ್ಸ್ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. 28ರಂದು ಬೆಳಿಗ್ಗೆ 10.10ಕ್ಕೆ ಕುಂದಗೋಳದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. 11.15ಕ್ಕೆ ಕೆಎಲ್‌ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1ಕ್ಕೆ ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 3.45ಕ್ಕೆ ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.