ADVERTISEMENT

ಸಮಗ್ರ ಭಾರತ, ದ್ವೇಷದ ನಡುವಿನ ಚುನಾವಣೆ: ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 13:21 IST
Last Updated 19 ಏಪ್ರಿಲ್ 2019, 13:21 IST
ಎಲ್‌.ಹನುಮಂತಯ್ಯ
ಎಲ್‌.ಹನುಮಂತಯ್ಯ   

ಹುಬ್ಬಳ್ಳಿ: ಸಮಗ್ರ ಭಾರತ ನಿರ್ಮಾಣ ಮಾಡುವ ಚಿಂತನೆ ಮತ್ತು ದ್ವೇಷದ ಭಾವನೆ ಬಿತ್ತುವ ಯೋಜನೆ ಈ ಎರಡು ವಿಚಾರಧಾರೆಗಳ ನಡುವೆ ಈ ಬಾರಿಯ ಚುನಾವಣೆ ನಡೆಯುತ್ತಿದೆ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಅಭಿಪ್ರಾಯಪಟ್ಟರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂದಿನ ಲೋಕಸಭಾ ಚುನಾವಣೆಗೂ ಮೊದಲು ನರೇಂದ್ರ ಮೋದಿ ನೀಡಿದ್ದ ಯಾವ ಭರವಸೆಗಳು ಈಡೇರಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅವುಗಳ ಬಗ್ಗೆ ಮಾತನಾಡುತ್ತಿಲ್ಲ. ಅವರ ಮಾತುಗಳು ಸಾರ್ವಜನಿಕ ಚರ್ಚೆಯ ವಿಷಯವಾಗಿಲ್ಲ. ಆದ್ದರಿಂದ ಇದು ಪ್ರಜಾಪ್ರಭುತ್ವ ಮತ್ತು ಅಧಿಕಾರಿಶಾಯಿಗಳ ನಡುವಿನ ಚುನಾವಣೆಯಾಗಿದೆ’ ಎಂದರು.

‘ಆರೇಳು ದಶಕ ಆಡಳಿತ ಮಾಡಿದ ಯಾವ ಪಕ್ಷಗಳು ಕೂಡ ಸೈನ್ಯ ಮತ್ತು ಯೋಧರ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಆದರೆ ಬಿಜೆಪಿ ಯೋಧರ ಸಾಹಸವನ್ನು ಚುನಾವಣಾ ಅಸ್ತ್ರ ಮಾಡಿಕೊಂಡಿದೆ. ಹೊಲಗಳಲ್ಲಿ ಕೆಲಸ ಮಾಡುವ ರೈತರು, ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ನಿಜವಾದ ರಾಷ್ಟ್ರಭಕ್ತರು. ಏನೂ ಕೆಲಸ ಮಾಡದೇ ಮೈಕ್‌ ಮುಂದೆ ಗಂಟೆಗಟ್ಟಲೇ ರಾಷ್ಟ್ರಭಕ್ತಿಯ ಬಗ್ಗೆ ಮಾತನಾಡುವವರು ನಕಲಿ’ ಎಂದು ಟೀಕಿಸಿದರು.

ADVERTISEMENT

‘ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷಿ ಬೆಳವಣಿಗೆಯ ಪ್ರಮಾಣ ವಾರ್ಷಿಕ ಶೇ 3.9ರಷ್ಟಿತ್ತು. ಮೋದಿ ಪ್ರಧಾನಿಯಾದ ಬಳಿಕ ಶೇ 3ಕ್ಕೆ ಇಳಿದಿದೆ. ಕಳೆದ ಐದು ವರ್ಷಗಳಲ್ಲಿ ಬಡತನ, ರೈತರ ಸಂಕಷ್ಟ, ಸಾರ್ವಜನಿಕರ ಬದುಕು ಎಲ್ಲವೂ ಕಷ್ಟವಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಇದೆಲ್ಲವನ್ನೂ ಬಿಟ್ಟು ಯೋಧರ ರಕ್ತದ ಮೇಲೆ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪ್ರೇಮ ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ ಎಂದರು.

ಸಮತಾ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ದಲಿತ ಮುಖಂಡರಾದ ವಿಜಯಕುಮಾರ ಗುಂಟ್ರಾಳ, ಮೋಹನ ಹಿರೇಮನಿ, ಅಶೋಕ ಕಾಶೇನವರ, ರೈಫ್‌ ಕೋಜೆ, ಲೋಹಿತ್ ಗಾಮನಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.