ಹೆಸ್ಕಾಂ: ವಿದ್ಯುತ್ ಸೋರಿಕೆ, ಕಳವು ಅವ್ಯಾಹತ
ಹುಬ್ಬಳ್ಳಿ: ವಿದ್ಯುತ್ ಬೇಡಿಕೆ ದಿನೇ ದಿನೆ ಹೆಚ್ಚುತ್ತಿದೆ. ಮತ್ತೊಂದೆಡೆ ಸೋರಿಕೆ, ಕಳ್ಳತನಗಳ ಪ್ರಕರಣಗಳೂ ಹೆಚ್ಚಾಗಿವೆ. ಇದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಮೌಲ್ಯದ ಲಕ್ಷಾಂತರ ಯೂನಿಟ್ ವಿದ್ಯುತ್ ದುರ್ಬಳಕೆ ಆಗುತ್ತಿದೆ. ಕೃಷಿ, ಮನೆಬಳಕೆ, ಕೈಗಾರಿಕೆ, ವಾಣಿಜ್ಯ ಹೀಗೆ ವಿವಿಧ ವಲಯಗಳಲ್ಲಿ ನಡೆಯುವ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಹೆಸ್ಕಾಂ ಜಾಗೃತ ದಳವು ದಾಳಿ ನಡೆಸಿ ಪ್ರಕರಣ ದಾಖಲಿಸುವುದು, ದಂಡ ವಿಧಿಸುವ ಕೆಲಸ ನಿರಂತರ ನಡೆದಿದೆ.
ಬೇಡಿಕೆ ಸರಿದೂಗಿಸಲು ವಿದ್ಯುತ್ ಉತ್ಪಾದನೆ ಹೆಚ್ಚಳ, ಲೋಡ್ ಶೆಡ್ಡಿಂಗ್ ಸೇರಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಅನೇಕ ಕ್ರಮಗಳ ಹೊರತಾಗಿಯೂ, ಲೆಕ್ಕಕ್ಕೆ ಸಿಗದೇ ಸೋರಿಕೆ ಆಗುವ ವಿದ್ಯುತ್ ಪ್ರಮಾಣವನ್ನು ತಗ್ಗಿಸುವುದು ಮಾತ್ರ ಸಾಧ್ಯವಾಗಿಲ್ಲ.
‘ಈ ಹಿಂದೆ ಕೈಗಾರಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಕಳವು ನಡೆಯುತ್ತಿತ್ತು. ನಿರಂತರ ಮೇಲ್ವಿಚಾರಣೆ ಪರಿಣಾಮವಾಗಿ ಇದು ತಗ್ಗಿದ್ದರೂ, ದುರ್ಬಳಕೆ ಸಂಪೂರ್ಣವಾಗಿ ನಿಂತಿಲ್ಲ’ ಎಂದು ಹೆಸ್ಕಾಂ ಜಾಗೃತ ದಳದ ಡಿಎಸ್ಪಿ ಶ್ರೀಪಾದ ಡಿ. ಜಲ್ದೆ ತಿಳಿಸಿದರು.
ಶಿಕ್ಷಾರ್ಹ ಪ್ರಕರಣ: ಐದು ವರ್ಷಗಳ ಅಂಕಿ–ಅಂಶ ಗಮನಿಸಿದರೆ, 2024ರಲ್ಲಿ ಬರೋಬ್ಬರಿ 10.49 ಲಕ್ಷ ಯೂನಿಟ್ ವಿದ್ಯುತ್ ದುರ್ಬಳಕೆ ಆಗಿದೆ. 2500ಕ್ಕೂ ಅಧಿಕ ಪ್ರಕರಣ ದಾಖಲಿಸಿ, ₹3.27 ಕೋಟಿ ದಂಡ ವಸೂಲಿ ಮಾಡಿದೆ. 2021ರಲ್ಲಿ 5.83 ಲಕ್ಷ, 2022 ಮತ್ತು 23ರಲ್ಲಿ ತಲಾ 9 ಲಕ್ಷಕ್ಕೂ ಅಧಿಕ ಯೂನಿಟ್ ದುರ್ಬಳಕೆ ಆಗಿದೆ. ಪ್ರಸಕ್ತ ವರ್ಷ ಜೂನ್ ಅಂತ್ಯದ ವರೆಗೆ 5 ಲಕ್ಷಕ್ಕೂ ಅಧಿಕ ಯೂನಿಟ್ ದುರ್ಬಳಕೆ ಪತ್ತೆಹಚ್ಚಲಾಗಿದೆ. ದಾಖಲಾದ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿ ದಂಡವನ್ನೂ ವಸೂಲಿ ಮಾಡಲಾಗಿದೆ.
ಶಿಕ್ಷಾರ್ಹವಲ್ಲದ ಪ್ರಕರಣ: 2022ರಲ್ಲಿ ಬರೋಬ್ಬರಿ 1.64 ಕೋಟಿ ಯೂನಿಟ್ ವಿದ್ಯುತ್ ದುರ್ಬಳಕೆ ಗುರುತಿಸಲಾಗಿದ್ದು, 6746 ಪ್ರಕರಣಗನ್ನು ದಾಖಲಿಸಿ ₹20 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. 2021, 23, 24ರಲ್ಲಿಯೂ ಈ ಮೊತ್ತ ಕ್ರಮವಾಗಿ ₹6.32, ₹7.75, ₹6.47 ಕೋಟಿಯಷ್ಟಿದೆ. 2025ರ ಜೂನ್ ಅಂತ್ಯದ ವರೆಗೆ 21.74 ಲಕ್ಷ ಯೂನಿಟ್ ದುರ್ಬಳಕೆ ಆಗಿದ್ದು, ₹5.13 ಕೋಟಿ ದಂಡ ವಿಧಿಸಲಾಗಿದೆ. ಈ ಪೈಕಿ ₹93.44 ಲಕ್ಷ ವಸೂಲಿ ಮಾಡಲಾಗಿದ್ದು, ಉಳಿದಂತೆ ಪ್ರಕರಣಗಳು ಚಾಲ್ತಿಯಲ್ಲಿವೆ.
ಸಾರ್ವಜನಿಕರು ರೈತರೊಂದಿಗೆ ನಿಯಮಿತವಾಗಿ ಸಭೆ ನಡೆಸಿ ವಿದ್ಯುತ್ ಕಳವು ಮಾಡಿದರೆ ಉಂಟಾಗುವ ಪರಿಣಾಮಗಳು ಕುರಿತು ತಿಳಿವಳಿಕೆ ನೀಡಲಾಗುತ್ತದೆ. ಜನರು ಅಧಿಕೃತವಾಗಿ ಸಂಪರ್ಕ ಪಡೆಯಬೇಕು–
––ಶ್ರೀಪಾದ ಡಿ. ಜಲ್ದೆ ಡಿಎಸ್ಪಿ ಹೆಸ್ಕಾಂ ಜಾಗೃತ ದಳ ಹುಬ್ಬಳ್ಳಿ
ದುರ್ಬಳಕೆಯಲ್ಲಿ ಎರಡು ವಿಧ
ವಿದ್ಯುತ್ ಮೀಟರ್ ಸಂಪರ್ಕವನ್ನೇ ಪಡೆಯದೆ ನೇರವಾಗಿ ತಂತಿಗೆ ಕೊಕ್ಕೆ ಹಾಕುವುದು ಮೀಟರ್ ತಪ್ಪಿಸಿ (ಬೈ ಪಾಸ್) ನೇರ ಸಂಪರ್ಕ ಪಡೆಯುವುದನ್ನು ಅಪರಾಧ ಪ್ರಕರಣ ಎಂದು ಗುರುತಿಸಲಾಗುತ್ತದೆ. ಇದಕ್ಕೆ ದಂಡದ ಜೊತೆಗೆ ಆರು ತಿಂಗಳಿಂದ ಐದು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವ ಹಾಗೂ ಎರಡು ವರ್ಷಗಳ ವರೆಗೆ ವಿದ್ಯುತ್ ಸಂಪರ್ಕವನ್ನೇ ಸ್ಥಗಿತಗೊಳಿಸುವ ಅವಕಾಶವೂ ಇದೆ. ಅನುಮತಿ ಪಡೆದ ಮಿತಿಗಿಂತ ಹೆಚ್ಚು ವಿದ್ಯುತ್ ಬಳಕೆ ಪರವಾನಗಿ ಪಡೆದ ಸ್ಥಳ ವ್ಯಾಪ್ತಿ ಬಿಟ್ಟು ಬೇರೆಡೆಗೆ ಸಂಪರ್ಕ ನೀಡುವುದು ಉದ್ದೇಶಿತ ಕಾರ್ಯ ಬಿಟ್ಟು ಬೇರೆ ಕಾರ್ಯಕ್ಕೆ ಬಳಕೆ ಮಾಡುವುದನ್ನು ಅಪರಾಧವಲ್ಲದ ಪ್ರಕರಣ ಎಂದು ಗುರುತಿಸಲಾಗುತ್ತದೆ. ಇದಕ್ಕೆ ಶಿಕ್ಷೆ ಇಲ್ಲದಿದ್ದರೂ ಪ್ರಕರಣ ದಾಖಲಿಸಿ ದಂಡ ಆಕರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.