ADVERTISEMENT

ಸಿ.ಎಂ ಭಾವನಾತ್ಮಕ ಪ್ರತಿಕ್ರಿಯೆ ಸಲ್ಲದು: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 16:55 IST
Last Updated 25 ಡಿಸೆಂಬರ್ 2018, 16:55 IST
   

ಹುಬ್ಬಳ್ಳಿ: ‘ಮುಖ್ಯಮಂತ್ರಿಯಾದವರು ಯಾವುದೇ ಸಂದರ್ಭದಲ್ಲೂ ಭಾವಾವೇಶಕ್ಕೆ ಒಳಗಾಗಿ ಮಾತನಾಡಬಾರದು. ಆದರೆ, ಎಚ್.ಡಿ. ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ನಡೆದ ಜೆಡಿಎಸ್ ಮುಖಂಡರ ಕೊಲೆಗೆ ಸಂಬಂಧಿಸಿದಂತೆ, ತಮ್ಮ ಹುದ್ದೆಯ ಘನತೆ ಮರೆತು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಗೆ ವ್ಯತಿರಿಕ್ತವಾದ ನಡೆಯಾಗಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮ್ಮ ಹೇಳಿಕೆ ಬಳಿಕ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಆ ಹೇಳಿಕೆ ವೈಯಕ್ತಿಕವಾದುದು. ಮುಖ್ಯಂತ್ರಿಯಾಗಿ ಹೇಳಿದ್ದಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಆ ಸ್ಥಾನದಲ್ಲಿ ಇರುವವರೆಗೆ ಮುಖ್ಯಮಂತ್ರಿಯೇ ಎಂಬುದನ್ನು ಮರೆಯಬಾರದು’ ಎಂದರು.

‘ಸಂಪುಟ ವಿಸ್ತರಣೆ ಬಳಿಕ, ಸರ್ಕಾರದೊಳಗೆ ಒಳಬೇಗುದಿ ಹೆಚ್ಚಾಗಿದೆ. ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಮುನಿಸಿಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬಿಜೆಪಿ ಸಂಪರ್ಕಿಸಿಲ್ಲ. ಕಾಂಗ್ರೆಸ್‌ನೊಳಗಿನ ಭಿನ್ನಮತ ಎಲ್ಲಿಗೆ ಮುಟ್ಟುತ್ತದೆಯೊ ಗೊತ್ತಿಲ್ಲ. ಎಲ್ಲವನ್ನೂ ಗಮನಿಸುತ್ತಿದ್ದೇವೆ. ಅಗತ್ಯ ಬಿದ್ದಾಗ, ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

ಅಸ್ಥಿರತೆ ನಿರ್ಮಾಣ– ಜೋಶಿ:‘ಸರ್ಕಾರದೊಳಗಿನ ಭಿನ್ನಮತದಿಂದಾಗಿ, ರಾಜ್ಯದಲ್ಲಿ ಅಸ್ಥಿರತೆ ನಿರ್ಮಾಣವಾಗಿದೆ. ಇತ್ತೀಚೆಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ ದೇವೇಗೌಡ ಅವರು ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ ಎಂದು ಮುಖ್ಯಮಂತ್ರಿಯಾಗಿರುವ ತಮ್ಮ ಮಗ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

‘ಸರ್ಕಾರ ನಡೆಸುತ್ತಿರುವ ಎರಡೂ ಪಕ್ಷಗಳ ನಡುವೆ ಒಳ ಬೇಗುದಿ ಇದೆ ಎಂಬುದಕ್ಕೆ ಈ ಅಸಮಾಧಾನ ಕನ್ನಡಿ ಹಿಡಿದಿದೆ. ಸಮ್ಮಿಶ್ರ ಸರ್ಕಾರ ಬಿದ್ದಾಗಷ್ಟೇ ರಾಜ್ಯದ ಕಲ್ಯಾಣವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮಂಡ್ಯದಲ್ಲಿ ಜೆಡಿಎಸ್‌ ಮುಖಂಡರೊಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಶೂಟ್ ಮಾಡಿ ಎಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತುಗಳು, ಸರ್ಕಾರದ ಅಸ್ಥಿರತೆಯಿಂದಾಗಿ ಅವರು ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.

ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಿ:‘ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣಕ್ಕೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿರುವುದು ಸ್ವಾಗತಾರ್ಹ. ಆದರೆ, ಕೇವಲ ಪತ್ರದಿಂದ ಕೆಲಸ ಆಗುವುದಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳಿಸಬೇಕು’ ಎಂದು ಸಲಹೆ ನೀಡಿದರು.

‘ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿದ ಮಾತ್ರಕ್ಕೆ ಕೃಷಿ ಕ್ಷೇತ್ರದ ಎಲ್ಲಾ ಸಮಸ್ಯೆ ಬಗೆಹರಿಯುವುದಿಲ್ಲ. ಅದು ತಾತ್ಕಾಲಿಕ ಪರಿಹಾರವಷ್ಟೇ. ಹಾಗಾಗಿ, ದೂರಗಾಮಿ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.