ADVERTISEMENT

ಇತಿಹಾಸ ಅರಿತು ದೇಶಭಕ್ತಿ ಬೆಳಸಿಕೊಳ್ಳಿ

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ: ಸಚಿವ ಪಾಟೀಲ ಕರೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:41 IST
Last Updated 6 ಏಪ್ರಿಲ್ 2021, 14:41 IST
ನರಗುಂದದ ಪುರಸಭೆ ಆವರಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು
ನರಗುಂದದ ಪುರಸಭೆ ಆವರಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು   

ನರಗುಂದ: ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನಾವು ಕಂಡಿಲ್ಲ. ಅದನ್ನು ತಿಳಿದುಕೊಂಡು ಹೋರಾಟಗಾರರನ್ನು ಸ್ಮರಿಸಬೇಕಿದೆ. ವಿಶೇಷವಾಗಿ ಯುವಜನತೆ ಇತಿಹಾಸ ಅರಿತು ದೇಶಭಕ್ತಿ ಬೆಳಸಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ.ಪಾಟೀಲ ಕರೆ ನೀಡಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದಿಂದ ನಡೆದ ಜಿಲ್ಲೆಯ ಪ್ರಥಮ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ’ಸ್ವಾತಂತ್ರ್ಯ ಗಳಿಸಿ 75 ವರ್ಷದ ಅಂಚಿನಲ್ಲಿರುವ ನಾವು ಇಂದು ಅಮೃತ ಮಹೋತ್ಸವಕ್ಕೆ ಚಾಲನೆ ಕೊಟ್ಟಿರುವುದು ಸ್ಮರಣೀಯ. ಸ್ವತಂತ್ರ್ಯ ಬಂದಾಗ ಭಾರತ ಬಡರಾಷ್ಟ್ರವಾಗಿತ್ತು. ಈಗ ಜಗತ್ತಿನಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ‘ ಎಂದರು.

’ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಎಲ್ಲ ರಾಜರಿಗೂ ಸಂಕಷ್ಟ ಉಂಟು ಮಾಡಿತ್ತು. ಇದರ ವಿರುದ್ಧ ಹೋರಾಡಿದ ಬಾಬಾ ಸಾಹೇಬ್‌ ಎಂದೇ ಜನಪ್ರಿಯರಾಗಿದ್ದ ನರಗುಂದದ ಭಾಸ್ಕರ್ ರಾವ್ ನೀತಿ ವಿರುದ್ಧ ಪ್ರತಿಭಟಿಸಿ ರಾತ್ರೋ ರಾತ್ರಿ ಇಂಗ್ಲಿಷರ ಮೇಲೆ ದಾಳಿ ಮಾಡಿ ಬ್ರಿಟಿಷ್ ಅಧಿಕಾರಿ ಮ್ಯಾನ್ ಸನ್ ರುಂಡವನ್ನು ಚೆಂಡಾಡಿ ಅಗಸಿ ಬಾಗಿಲಿಗೆ ತಂದು ಕಟ್ಟುತ್ತಾರೆ. ಅಂದಿನಿಂದ ನರಗುಂದದ ಅಗಸಿ ಕೆಂಪಗಸಿ ಎಂದು ಪ್ರಖ್ಯಾತವಾಯಿತು‘ ಎಂದು ಸಚಿವರು ಇತಿಹಾಸವನ್ನು ನೆನೆದರು.

ADVERTISEMENT

’ಸ್ವಾತಂತ್ರ್ಯ ಹೋರಾಟಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಮುಂಡರಗಿ ಭೀಮರಾಯ, ಜಕ್ಕಲಿಯ ಗ್ರಾಮದ ಅಂದಾನಪ್ಪ ಮೇಟಿ ಮುಂತಾದವರನ್ನು ನೆನಯಲೇಬೇಕು‘ ಎಂದರು.

ಉಪನ್ಯಾಸಕ ಎಂ.ಎಸ್. ಯಾವಗಲ್ ಹೋರಾಟಗಾರ ಭಾಸ್ಕರರಾವ್‌ ಭಾವೆಯವರ ಹೋರಾಟ, ನರಗುಂದ ರೈತ ಬಂಡಾಯ ಹಾಗೂ ಸ್ವಾತಂತ್ರ್ಯ ಹೋರಾಟದ ಬಂಡಾಯವನ್ನು ವಿವಿಧ ದೃಷ್ಟಾಂತಗಳೊಂದಿಗೆ ವಿವರಿಸಿದರು.

ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಣುಕಾ ಅವರಾದಿ , ಎಪಿಎಂಸಿ ಅಧ್ಯಕ್ಷ ಯಲ್ಲಪ್ಪ ಗೌಡರ, ಪ್ರಮುಖರಾದ ಅಜ್ಜಪ್ಪ ಹುಡೇದ, ತಿಮ್ಮನಗೌಡರ, ಜಿ.ಬಿ. ಕುಲಕರ್ಣಿ, ಗುರಪ್ಪ ಆದಪ್ಪನವರ, ಪ್ರಕಾಶಗೌಡ ತಿರಕನಗೌಡ, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ತಾ.ಪಂ. ಇಒ ಚಂದ್ರಶೇಖರ ಕುರ್ತಕೋಟಿ, ಸಂಜೀವ ಚವ್ಹಾಣ, ರೂಪಾ ಗಂಧದ, ಡಿವೈಎಸ್ಪಿ ಶಂಕರ ರಾಗಿ, ಸಿಪಿಐ ನಂದೀಶ ಕುಂಬಾರ, ಎನ್.ಆರ್. ನಿಡಗುಂದಿ, ಬಿ.ಎಂ.ಬಡಿಗೇರ, ರಮೇಶಗೌಡ ಕರಕನಗೌಡ್ರ, ರೇಣುಕಾ ಅವರಾದಿ, ನೇತಾಜಿಗೌಡ ಕೆಂಪನಗೌಡ್ರ, ಬಸವರಾಜ ಪಾಟೀಲ, ರಾಚನಗೌಡ ಪಾಟೀಲ, ಸಿದ್ದೇಶ ಹೂಗಾರ, ಗೀತಾ ಹೂಗಾರ, ಎಚ್.ಎಂ.ಖುದಾವಂದ, ಮೈತ್ರಿ ಎಸ್., ಇದ್ದರು. ಗಿರೀಶ ದಾಸರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.