ಧಾರವಾಡ: ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳು ಅನರ್ಹರಿಗೆ ತಲುಪದಂತೆ ಮತ್ತು ಸೋರಿಕೆಯಾಗದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣ್ ಟ್ರ್ಯಾಕರ್ ಮತ್ತು ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಪೋಷಣ ಅಭಿಯಾನದಡಿ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಪ್ರತಿ ಅಂಗನವಾಡಿ ಕೇಂದ್ರಕ್ಕೆ ಪೂರೈಸಿದ ಆಹಾರ ಪದಾರ್ಥಗಳನ್ನು ಬಳಸಿ ಖಾಲಿ ಚೀಲಗಳನ್ನು ತಿಂಗಳ ಕೊನೆಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಕಚೇರಿಗೆ ವಾಪಸ್ ನೀಡಬೇಕು. ಎಂದು ತಿಳಿಸಿದರು.
ಇಲಾಖೆಯ ಯೋಜನೆಗಳ ಅನುಷ್ಠಾನ ನಿಟ್ಟಿನಲ್ಲಿ ಅಂಗನಾಡಿ ಶಿಕ್ಷಕಿಯರು, ಸಹಾಯಕಿಯರು, ಮೇಲ್ವಿಚಾರಕರು ಮತ್ತು ಸಿಡಿಪಿಒಗಳ ಪಾತ್ರ ಮುಖ್ಯವಾದುದು. ಇಲಾಖೆಯಿಂದ ಅವರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಿ ವಿವರಿಸಬೇಕು ಎಂದು ಸಲಹೆ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣನ್ನೂ ಮಧ್ಯಾಹ್ನದ ಬಿಸಿಯೂಟ ಪೂರೈಸುವ ಸ್ವಯಂ ಸೇವಾ ಸಂಸ್ಥೆಗಳೇ ವಿತರಿಸುವುದಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಲಿಖಿತವಾಗಿ ತಿಳಿಸುವಂತೆ ಸಂಸ್ಥೆಗಳಿಗೆ ಸೂಚನಾ ಪತ್ರ ನೀಡಲಾಗಿದೆ ಎಂದರು.
ಎಸ್‌ಬಿಎಂ ನಿರ್ದೇಶಕಿ ರೇಖಾ ಡೊಳ್ಳಿನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಚ್.ಎಚ್.ಕುಕನೂರ ಉಪಸ್ಥಿತರಿದ್ದರು.
ಫೇಸ್ ಕ್ಯಾಪ್ಚರ್ ಆ್ಯಪ್‍ನಲ್ಲಿ ಮಕ್ಕಳ ದಾಖಲಾತಿಯನ್ನು ನಿಗದಿತ ಅವಧಿಯೊಳಗೆ ದಾಖಲಿಸಬೇಕು.ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗುಣಮಟ್ಟದ ಆಹಾರ ಪೂರೈಸಬೇಕು. ಅಧಿಕಾರಿಗಳು ನಿಗಾ ವಹಿಸಬೇಕು.ಭುವನೇಶ ಪಾಟೀಲ ಸಿಇಒ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.