ADVERTISEMENT

ನಿಯಂತ್ರಣಕ್ಕೆ ಬಾರದ ಸಾಂಕ್ರಾಮಿಕ ರೋಗ; ಹೆಚ್ಚುತ್ತಿವೆ ಡೆಂಗಿ ಪ್ರಕರಣ

ಆರೋಗ್ಯ ಇಲಾಖೆ ಎಚ್ಚರಿಕೆ

ಶಿವರಾಯ ಪೂಜಾರಿ
Published 26 ಡಿಸೆಂಬರ್ 2023, 6:43 IST
Last Updated 26 ಡಿಸೆಂಬರ್ 2023, 6:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೆಮ್ಮು, ನೆಗಡಿ, ಜ್ವರ ಸೇರಿ ಸಾಂಕ್ರಾಮಿಕ ರೋಗಗಳಾದ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹವಾಮಾನ ವೈಪರೀತ್ಯದಿಂದ ಮಕ್ಕಳು, ಹಿರಿಯರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಕ್ರಮವಹಿಸಿದ್ದರೂ ಸಾಮಾನ್ಯ ವೈರಾಣು ಜ್ವರ ಹೆಚ್ಚು ಜನರನ್ನು ಬಾಧಿಸುತ್ತಿದೆ.

ADVERTISEMENT

ಪ್ರಸಕ್ತ ಜನವರಿಯಿಂದ ನವೆಂಬರ್ ಅಂತ್ಯದವರೆಗೆ 2,120 ಜನರಲ್ಲಿ ಡೆಂಗಿ ಗುಣಲಕ್ಷಣಗಳು ಕಂಡುಬಂದಿದ್ದು, 1,961 ಡೆಂಗಿ ಶಂಕಿತರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 203 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಧಾರವಾಡ ನಗರ ಸೇರಿ ತಾಲ್ಲೂಕಿನಲ್ಲಿ 127, ಹುಬ್ಬಳ್ಳಿ ತಾಲ್ಲೂಕಿನಲ್ಲಿ 8, ಹುಬ್ಬಳ್ಳಿ ನಗರದಲ್ಲಿ 35, ಕಲಘಟಗಿಯಲ್ಲಿ 14, ಕುಂದಗೋಳದಲ್ಲಿ 11, ನವಲಗುಂದದಲ್ಲಿ 8 ಪ್ರಕರಣಗಳು ದಾಖಲಾಗಿವೆ.

‘ಕೋವಿಡ್ ಹಿನ್ನೆಲೆಯಲ್ಲಿ 2020ರಲ್ಲಿ 36 ಡೆಂಗಿ ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಕಳೆದ ವರ್ಷ 2022ರಲ್ಲಿ ಗರಿಷ್ಠ ಪ್ರಕರಣ ಕಾಣಿಸಿಕೊಂಡಿದ್ದವು. 1,136 ಡೆಂಗಿ ಶಂಕಿತರ ರಕ್ತ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 264 ಪ್ರಕರಣಗಳು ದೃಢಪಟ್ಟಿದ್ದವು’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷ 14 ಜನರಲ್ಲಿ ಮಲೇರಿಯಾ ಕಂಡು ಬಂದಿದೆ.ಚಿಕೂನ್‌ಗುನ್ಯ ಗುಣಲಕ್ಷಣ ಕಂಡುಬಂದ 1,528 ಜನರನ್ನು ತಪಸಣೆ ಒಳಪಡಿಸಲಾಗಿದ್ದು, 30 ಜನರಲ್ಲಿ ಸೋಂಕು ದೃಢಪಟ್ಟಿದೆ. ಧಾರವಾಡ ಹಾಗೂ ಹುಬ್ಬಳ್ಳಿಯಲ್ಲೇ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯ ಪ್ರಕರಣಗಳು ಹೆಚ್ಚು ಕಂಡುಬಂದಿವೆ.

‘ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೊಳಚೆ ನೀರು ನಿಲ್ಲದಂತೆ, ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕ್ರಿಮಿನಾಶಕ ಸಿಂಪಡಿಸಬೇಕು. ಕ್ಲೋರಿನ್‌ ದ್ರಾವಣ ಸೇರಿಸಿ ನೀರನ್ನು ಶುದ್ಧೀಕರಿಸಬೇಕು. ಮುಂಜಾಗ್ರತಾ ಕ್ರಮಗಳು ಪಾಲನೆಯಾಗದ ಕಾರಣ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ’ ಎಂದು ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾ ಅಧಿಕಾರಿ ಡಾ. ಮಂಜುನಾಥ ಮಾಹಿತಿ ನೀಡಿದರು.

‘ಮೈಕೈ ನೋವು, ತೀವ್ರ ಜ್ವರ,ಮತ್ತು ಕೀಲುನೋವು, ತಲೆನೋವು, ಕಣ್ಣಿನ ಹಿಂಭಾಗದ ನೋವು, ವಾಕರಿಕೆ ಮತ್ತು ವಾಂತಿ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗಿನಿಂದ ರಕ್ತಸ್ರಾವವಾಗುವುದು ಡೆಂಗಿ ರೋಗದ ಲಕ್ಷಣ’ ಎಂದರು.

‘ಡೆಂಗಿ ಹರಡುವ ಸೊಳ್ಳೆ ಶುದ್ಧ ನೀರಿನಲ್ಲೂ ಉತ್ಪತ್ತಿ ಆಗುತ್ತದೆ. ನೀರಿನ ತೊಟ್ಟಿ, ಡ್ರಮ್‌, ಬ್ಯಾರೆಲ್‍ ಮತ್ತು ಸಿಂಟೆಕ್ಸ್‌ಗಳನ್ನು ಆಗಾಗ ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡಬೇಕು. ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು’ ಎಂದರು.

ಪಾಲಿಕೆ ವತಿಯಿಂದ ಅವಳಿ ನಗರದಲ್ಲಿ ಫಾಗಿಂಗ್ ಮಾಡಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಬಿಸಿನೀರು ಕುಡಿಯಬೇಕು.
-ಈಶ್ವರ ಉಳ್ಳಾಗಡ್ಡಿ, ಹು–ಧಾ ಮಹಾನಗರ ಪಾಲಿಕೆ ಆಯುಕ್ತರು
ಆರೋಗ್ಯ ಕಾರ್ಯಕರ್ತರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಶುಕ್ರವಾರವೂ ಜನರ ಮನೆ–ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ. ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
-ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.