ADVERTISEMENT

ಎಕ್ಸಿಟ್‌ ಪೋಲ್‌ ಬಗ್ಗೆ ನಂಬಿಕೆ ಇಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:10 IST
Last Updated 8 ಅಕ್ಟೋಬರ್ 2024, 16:10 IST
ಡಿ.ಕೆ. ಶಿವಕುಮಾರ್ 
ಡಿ.ಕೆ. ಶಿವಕುಮಾರ್    

ಹುಬ್ಬಳ್ಳಿ: ‘ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಬಗ್ಗೆ ನನಗೆ ಯಾವುದೇ ನಂಬಿಕೆ ಇಲ್ಲ. ಹಿಂದೆಯೂ ನಂಬಿಲ್ಲ, ಮುಂದೆಯೂ ನಂಬಲ್ಲ. ನಮ್ಮ ರಾಜ್ಯದಲ್ಲೂ ಎಕ್ಸಿಟ್‌ ಪೋಲ್‌ ಸುಳ್ಳಾಗಿದೆ’ ಎಂದು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌  ಹೇಳಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಶೀಘ್ರದಲ್ಲಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ’ ಎಂದರು. 

ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹರಿಯಾಣದಲ್ಲಿ ಯಾಕೆ ಹಿನ್ನಡೆಯಾಗಿದೆ ಎನ್ನುವುದರ ಬಗ್ಗೆ ಪಕ್ಷದ ಒಳಗೆ ಚರ್ಚೆ ಮಾಡುತ್ತೇವೆ. ಹರಿಯಾಣ ದೆಹಲಿಗೆ ಹತ್ತಿರವಿರುವ ರಾಜ್ಯ. ರಾಜಕೀಯವಾಗಿ ಸಾಕಷ್ಟು ಮಹತ್ವ ಇದೆ. ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು, ಆದರೆ ಹುಸಿಯಾಗಿದೆ. ಮತದಾರರ ತೀರ್ಪು ನಾವು ಒಪ್ಪಲೇಬೇಕು’ ಎಂದು ಹೇಳಿದರು.

ADVERTISEMENT

‘ಜಮ್ಮು–ಕಾಶ್ಮೀರದಲ್ಲಿ ನಮ್ಮ ನಿರೀಕ್ಷೆಯಂತೆ ಇಂಡಿಯಾ ಒಕ್ಕೂಟಕ್ಕೆ ಗೆಲುವಾಗಿದೆ. ಬಹಳ ದಿನಗಳ ನಂತರ ಅಲ್ಲಿ ಚುನಾವಣೆ ನಡೆದಿತ್ತು, ನಮಗೆ ಗೆಲುವಾಗಿದೆ. ಪ್ರಜಾಪ್ರಭುತ್ವ ಉಳಿದಿದೆ’ ಎಂದರು.

ಹರಿಯಾಣ ಸೋಲಿಗೆ ಗುಂಪುಗಾರಿಕೆ ಕಾರಣ

ಕೋಲಾರ: ಹರಿಯಾಣದಲ್ಲಿ ಪಕ್ಷದೊಳಗಿನ ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವಲ್ಲಿ ಎಡವಿದ್ದೇವೆ. ಅತಿಯಾದ ಆತ್ಮವಿಶ್ವಾಸ ಮುಳುವಾಯಿತು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೋಲನ್ನು ವಿಶ್ಲೇಷಿಸಿದ್ದಾರೆ.

ಹರಿಯಾಣದಲ್ಲಿ ಮೂರು ಗುಂಪುಗಳಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ‌ಹೂಡಾ, ಕುಮಾರಿ ಸೆಲ್ಜಾ ಹಾಗೂ ರಣದೀಪ್‌ ಸುರ್ಜೇವಾಲಾ ನಡುವೆ ಹೊಂದಾಣಿಕೆ ಆಗಲಿಲ್ಲ ಎಂದು ಅವರು ಒಪ್ಪಿಕೊಂಡರು.

‘ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಎಲ್ಲ ಸಮೀಕ್ಷೆಗಳು ಹೇಳಿದ್ದವು. ಈಗ ನೋಡಿದರೆ ಭಾರಿ ವ್ಯತ್ಯಾಸವಾಗಿದೆ. ಬಹಳ ಅಚ್ಚರಿ ಫಲಿತಾಂಶ ಬಂದಿದೆ. ಅಲ್ಲಿನ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ನಾವು ಎಡವಿದ್ದೇವೆ’ ಎಂದು ವಿಶ್ಲೇಷಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.