ADVERTISEMENT

ಹುಬ್ಬಳ್ಳಿ: ಭರವಸೆಗಳಾಗಿಯೇ ಉಳಿದ ನಿರೀಕ್ಷೆಗಳು

ಅಧಿಕಾರ ಹಂಚಿಕೆ, ಹೊಂದಾಣಿಕೆಯಲ್ಲೇ ಕಳೆದು ಹೋದ 40 ತಿಂಗಳು

ಪ್ರಮೋದ
Published 9 ಜುಲೈ 2020, 6:41 IST
Last Updated 9 ಜುಲೈ 2020, 6:41 IST
ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)
ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)   

ಹುಬ್ಬಳ್ಳಿ: ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು (ಎಪಿಎಂಸಿ) ಅಭಿವೃದ್ಧಿ ಮಾಡುವುದಾಗಿ ಹೇಳಿ ವಿವಿಧ ರಾಜಕೀಯ ಪಕ್ಷಗಳಿಂದ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಸದಸ್ಯರು, ಬಳಿಕ ಕೊಟ್ಟ ಭರವಸೆಗಳನ್ನು ಮರೆತು ಬಿಡುತ್ತಿದ್ದಾರೆ. ಇದರಿಂದ ಎಪಿಎಂಸಿ ಈಗಲೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಈಗಿನ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾದ ಈಶ್ವರ ಕಿತ್ತೂರು ಹತ್ತು ತಿಂಗಳು, ಜಗನ್ನಾಥಗೌಡ ಸಿದ್ದನನೌಡ್ರ 20 ತಿಂಗಳು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಲಿ ಅಧ್ಯಕ್ಷ ರಾಮಚಂದ್ರ ಜಾಧವ್ ಹತ್ತು ತಿಂಗಳು ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ.

ಜಗನ್ನಾಥಗೌಡ ಸಿದ್ದನನೌಡ್ರ ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿ 434 ಎಕರೆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ನೀರಿನ ಸೌಲಭ್ಯ ಕಲ್ಪಿಸಲು ವ್ಯವಸ್ಥೆ, ಭಾನುವಾರದ ಸಂತೆ, ಬೀದಿ ದೀಪಗಳ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅವರ ಹಿಂದೆ ಅಧಿಕಾರ ನಡೆಸಿದ ವಿವಿಧ ಪಕ್ಷಗಳ ಬೆಂಬಲಿತ ಅಧ್ಯಕ್ಷರು ಕೂಡ ಅಭಿವೃದ್ಧಿಯ ಮಂತ್ರ ಮುಂದಿಟ್ಟುಕೊಂಡೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.

ADVERTISEMENT

ಎಪಿಎಂಸಿ ಆವರಣದಲ್ಲಿ 132 ಹಮಾಲಿ ಕಾರ್ಮಿಕರ ಕುಟುಂಬಗಳು ವಾಸವಾಗಿವೆ. ಅವರಿಗೆ ಈಗಲೂ ಕುಡಿಯುವ ನೀರಿಗೆ ಮಹಾನಗರ ಪಾಲಿಕೆಯೆ ಟ್ಯಾಂಕರ್‌ ನೀರೇ ಗತಿ. ವಾರಕ್ಕೆ ಎರಡು ಸಲ ಟ್ಯಾಂಕರ್‌ನಿಂದ ಬರುವ ನೀರಿಗಾಗಿ ಅಲ್ಲಿಯ ಜನ ಗುದ್ದಾಡಬೇಕಾದ ಪರಿಸ್ಥಿತಿಯಿದೆ. ಬೀದಿದೀಪಗಳ ಕೊರತೆಯಿಂದ ಕತ್ತಲಲ್ಲೇ ಬದುಕಬೇಕಾಗಿದೆ.

ಎಪಿಎಂಸಿಯಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಕಾರಣ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಕಾಯಂ ಪರಿಹಾರ ಸಿಗುತ್ತದೆ ಎಂದು ವ್ಯಾಪಾರಿಗಳು, ಹಮಾಲಿ ಕೂಲಿ ಕಾರ್ಮಿಕರು ಮೇಲಿಂದ ಮೇಲೆ ಒತ್ತಾಯಿಸಿದ್ದರು. ಎಪಿಎಂಸಿ ಆವರಣದಲ್ಲಿಯೇ ಪೊಲೀಸ್‌ ಠಾಣೆ ನಿರ್ಮಿಸಲು 2010ರಲ್ಲಿ 20 ಗುಂಟೆ ಜಾಗ ನೀಡಲಾಗಿದೆ. ಇದುವರೆಗೆ ಕಾಮಗಾರಿಯೇ ಆರಂಭವಾಗಿಲ್ಲ. ಅಕ್ಕಿಹೊಂಡ ಮತ್ತು ಕಾಳುಕಡಿ ಮಾರುಕಟ್ಟೆ ಬಳಿ ಹೆಚ್ಚು ಕಳ್ಳತನ ನಡೆಯುತ್ತಿವೆ. ಇದರ ಬಗ್ಗೆ ವ್ಯಾಪಾರಿಗಳು ಹಲವು ಬಾರಿ ನೋವು ತೋಡಿಕೊಂಡರೂ ಸ್ಪಂದನೆ ಸಿಕ್ಕಿಲ್ಲ.

21 ವರ್ಷಗಳಿಂದ ಎಪಿಎಂಸಿಯಲ್ಲಿ ಹಮಾಲಿ ಕಾರ್ಮಿಕರಾಗಿರುವ ದುರ್ಗಪ್ಪ ಚಿಕ್ಕತುಂಬಳ ‘ಆವರಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೀದಿ ದೀಪಗಳ ವ್ಯವಸ್ಥೆಯೇ ಇಲ್ಲ. ಅಧಿಕಾರಕ್ಕೆ ಬಂದವರು ಹಾಗೂ ಎಪಿಎಂಸಿ ಆಡಳಿತ ಮಂಡಳಿ ಸಮಿತಿಯವರು ಕೊಡುವ ಭರವಸೆಗಳು ನಿರೀಕ್ಷೆಗಳಾಗಿಯಷ್ಟೇ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ 9ರಂದು ಚುನಾವಣೆ

ಎಪಿಎಂಸಿಯ ಉಳಿದ ಕೊನೆಯ 20 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಗುರುವಾರ (ಜು. 9) ಚುನಾವಣೆ ನಡೆಯಲಿದೆ.

ಒಟ್ಟು 17 ಸದಸ್ಯರಲ್ಲಿ ಅಧಿಕಾರದ ಗದ್ದುಗೆ ಏರಲು 9 ಸದಸ್ಯರ ಬಲ ಅಗತ್ಯವಿದೆ. ಬಿಜೆಪಿ ಬೆಂಬಲಿತ ಏಳು ಅಭ್ಯರ್ಥಿಗಳು ಇದ್ದಾರೆ. ಮೂವರು ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಿದ್ದಾರೆ. ಹೀಗಾಗಿ ಈ ಬಾರಿಯೂ ಬಿಜೆಪಿ ಬೆಂಬಲಿತರಿಗೆ ಅಧಿಕಾರ ದಕ್ಕುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್‌ ಬೆಂಬಲಿತ ನಾಲ್ವರು ಸದಸ್ಯರಿದ್ದಾರೆ.

ಈ ಕುರಿತು ಹಾಲಿ ಅಧ್ಯಕ್ಷ ರಾಮಚಂದ್ರ ಜಾಧವ್‌ ಅವರನ್ನು ಪ್ರಶ್ನಿಸಿದಾಗ ‘ಉಳಿದ ಅವಧಿಯಲ್ಲಿ ಬಿಜೆಪಿಯವರೇ ಅಧಿಕಾರಕ್ಕೆ ಬರಬೇಕೆನ್ನುವ ಆಸೆ ನನ್ನದು. ಪಕ್ಷದ ಹಿರಿಯರು ಹೇಳಿದಂತೆ ನಡೆಯುವುದಷ್ಟೇ ನಮ್ಮ ಕೆಲಸ’ ಎಂದರು.

***

ಅಧ್ಯಕ್ಷನಾಗಿ 9 ತಿಂಗಳಷ್ಟೇ ಕಳೆದಿವೆ. ಅದರಲ್ಲಿ ನಾಲ್ಕು ತಿಂಗಳು ಲಾಕ್‌ಡೌನ್‌ನಲ್ಲಿಯೇ ಕಳೆದು ಹೋದ ಕಾರಣ ಅಭಿವೃದ್ಧಿಗೆ ಸಮಯವೇ ಸಿಗಲಿಲ್ಲ.

-ರಾಮಚಂದ್ರ ಜಾಧವ್, ಎಪಿಎಂಸಿ ಹಾಲಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.